ಉತ್ತರಾಖಂಡದ ಡೆಹ್ರಾಡೂನ್ ನಗರದಲ್ಲಿ ಯುವತಿಯೊಬ್ಬಳು ಆಯುಧಗಳನ್ನು ಝಳಪಿಸುತ್ತಾ ರೀಲ್ಸ್ ಮಾಡಿದ್ದು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಯುವತಿ ತನ್ನ ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಸ್ಟಂಟ್ ವಿಡಿಯೋಗಳನ್ನು ಹಂಚಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನಿಕ್ಕಿ ರಾಣಾ ಎಂಬ ಯುವತಿ ಪಿಸ್ತೂಲ್ ಮತ್ತು ರೈಫಲ್ ಹಿಡಿದು ಪೋಸ್ ನೀಡಿದ್ದಾಳೆ.
ಒಂದು ವೀಡಿಯೊದಲ್ಲಿ ನಿಕ್ಕಿ ರಾಣಾ ತನ್ನ ಕೈಯಲ್ಲಿ ಪಿಸ್ತೂಲ್ ಹಿಡಿದು ಚಲಿಸುವ ಫಾರ್ಚುನರ್ ಕಾರಿನ ಬಾನೆಟ್ ಮೇಲೆ ಕುಳಿತಿರುವುದನ್ನು ಕಾಣಬಹುದು. ಮತ್ತೊಂದರಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ರೈಫಲ್ ಅನ್ನು ಹಿಡಿದುಕೊಂಡು ಹೋಗುತ್ತಿರುವುದನ್ನು ನೋಡಬಹುದು.
ಪತ್ರಕರ್ತರೊಬ್ಬರು ಯುವತಿಯ ಈ ವಿಡಿಯೋಗಳನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಉತ್ತರಾಖಂಡ ಮತ್ತು ಡೆಹ್ರಾಡೂನ್ ಪೊಲೀಸ್ ಇಲಾಖೆಗಳಿಗೆ ವಿಡಿಯೋ ಟ್ಯಾಗ್ ಮಾಡಿದ್ದಾರೆ. ಉತ್ತರಾಖಂಡ ಪೊಲೀಸರು ವಿಡಿಯೋಗಳಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಡೆಹ್ರಾಡೂನ್ ಪೊಲೀಸರಿಗೆ ಸೂಚಿಸಿರುವುದಾಗಿ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.
ರಾಜ್ಯ ಪೊಲೀಸರ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಡೆಹ್ರಾಡೂನ್ ಪೊಲೀಸರು, ಮುಂದಿನ ಕ್ರಮಕ್ಕಾಗಿ ವೈರಲ್ ವೀಡಿಯೊಗಳ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಆರೋಪಿತ ಯುವತಿ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿದೆಯೇ ಅಥವಾ ಆಕೆಯನ್ನು ಬಂಧಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಯುವತಿಯು ಆಯುಧಗಳನ್ನು ಝಳಪಿಸುತ್ತಿರುವುದು ಮಾತ್ರವಲ್ಲದೆ, ಚಲಿಸುವ ಎಸ್‌ಯುವಿಯ ಬಾನೆಟ್‌ನಲ್ಲಿ ಕುಳಿತು ಅಪಾಯಕಾರಿ ಸಾಹಸ ಪ್ರದರ್ಶಿಸುತ್ತಿರುವ ವಿಡಿಯೋಗಳನ್ನು ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಹಂಚಿಕೊಂಡಿದ್ದಾರೆ.