ನವದೆಹಲಿ: ಅಗ್ನಿಪಥ್ ಯೋಜನೆಯಿಂದ ಯಾವುದೇ ಅನ್ಯಾಯವಾಗಿಲ್ಲ. ಇದು ಮೂರು ದಶಕಗಳ ಹಿಂದಿನ ಯೋಜನೆಯಾಗಿದೆ. ಅಗ್ನಿವೀರರಿಗೆ ಶೇ.10ರಷ್ಟು ಮೀಸಲಾತಿ ಸಹ ನೀಡಲಾಗುವುದು ಎಂದು ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ, 1989ರಿಂದಲೂ ಅಗ್ನಿಪಥ್ ಯೋಜನೆ ಜಾರಿ ಬಗ್ಗೆ ಚರ್ಚೆಯಲ್ಲಿತ್ತು. ಇದು ಹೊಸ ಯೋಜನೆಯಲ್ಲ ಎಂದು ಹೇಳಿದರು.
ಅಗ್ನಿವೀರರಿಗೆ ರಕ್ಷಣಾ ಸಚಿವಾಲಯದ ನೇಮಕಾತಿಯಲ್ಲಿ ಶೇ.10ರಷ್ಟು ಮೀಸಲಾತಿ ನೀಡಲಾಗುವುದು. ನೇಮಕಾತಿ ವೇಳೆ ಹಳ್ಳಿಗಳಲ್ಲಿರುವ ಯುವಕರಿಗೆ ಶೇ.70ರಷ್ಟು ಆದ್ಯತೆ ನೀಡಲಾಗುವುದು. ಅಗ್ನಿವೀರರಿಗೆ 1 ಕೋಟಿ ರೂಪಾಯಿ ಜೀವವಿಮೆ ನೀಡಲಾಗುವುದು. ಭತ್ಯೆಯಲ್ಲಿಯೂ ಯಾವುದೇ ರೀತಿ ತಾರತಮ್ಯವಿಲ್ಲ ಎಂದು ತಿಳಿಸಿದ್ದಾರೆ.
ಹೆಚ್ಚಿನ ಭತ್ಯೆಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಆರಂಭದಲ್ಲಿ 46 ಸಾವಿರ ರೂಪಾಯಿ ಸಂಬಳ. ನಂತರದ ದಿನಗಳಲ್ಲಿ 1.25 ಲಕ್ಷದವರೆಗೂ ಸಂಬಳ ನೀಡಲಾಗುವುದು. ಅಗ್ನಿವೀರರ ಮೊದಲ ಬ್ಯಾಚ್ ನ ವಯೋಮಿತಿ 5 ವರ್ಷ ಹೆಚ್ಚಳ ಮಾಡಲಾಗಿದೆ ಎಂದು ವಿವರಿಸಿದ್ದಾರೆ.