
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಶ್ರೀ ಧರ್ಮಸ್ಥಳದಲ್ಲಿ ಡಿ. 8 ರಿಂದ 12ರವರೆಗೆ ಲಕ್ಷ ದೀಪೋತ್ಸವ ಕಾರ್ಯಕ್ರಮಗಳು ನಡೆಯಲಿವೆ.
ಡಿ. 11ರಂದು ಸಂಜೆ 5 ಗಂಟೆಗೆ ಸರ್ವಧರ್ಮ ಸಮ್ಮೇಳನದ 91ನೇ ಅಧಿವೇಶನ ನಡೆಯಲಿದ್ದು, ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಉದ್ಘಾಟಿಸುವರು. ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ.
ಸುಪ್ರೀಂ ಕೋರ್ಟ್ ವಕೀಲ ಡಾ. ಎಂ.ಆರ್. ವೆಂಕಟೇಶ್, ಬೆಂಗಳೂರಿನ ವಿಭು ಅಕಾಡೆಮಿ ಮುಖ್ಯಸ್ಥ ಮಹಮ್ಮದ್ ಗೌಸ್ ಹವಾಲ್ದಾರ ಧಾರ್ಮಿಕ ಉಪನ್ಯಾಸ ನೀಡುವರು. ರಾತ್ರಿ 8.30 ಕ್ಕೆ ಬೆಂಗಳೂರಿನ ಅನುರಾಧ ವಿಕ್ರಾಂತ್ ಮತ್ತು ಬಳಗದವರಿಂದ ನೃತ್ಯ ಪ್ರದರ್ಶನ ನಡೆಯಲಿದೆ.
ಡಿ. 12 ರಂದು ಸಂಜೆ 5 ಗಂಟೆಗೆ ಇಸ್ರೋ ಅಧ್ಯಕ್ಷ ಡಾ. ಎಸ್. ಸೋಮನಾಥ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಗಮಕಿ ಡಾ. ಎ.ವಿ. ಪ್ರಸನ್ನ ಅಧ್ಯಕ್ಷತೆ ವಹಿಸುವವರು.
ಡಿ. 8ರಂದು ಬೆಳಗ್ಗೆ 10.30 ಕ್ಕೆ ಹೈಸ್ಕೂಲ್ ವಠಾರದಲ್ಲಿ ರಾಜ್ಯಮಟ್ಟದ ವಸ್ತು ಪ್ರದರ್ಶನ ನಡೆಯಲಿದ್ದು, ಪುತ್ತೂರು ವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್ ಉದ್ಘಾಟಿಸಲಿದ್ದಾರೆ. ವಸ್ತು ಪ್ರದರ್ಶನ ಮಂಟಪದಲ್ಲಿ ಪ್ರತಿದಿನ ಸಂಜೆ ಆರರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಡಿ. 10 ರಂದು ರಾತ್ರಿ 7 ರಿಂದ 10ರವರೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ಸಂಗೀತ ನಿರ್ದೇಶಕ ಗುರು ಕಿರಣ್ ಮತ್ತು ಬಳಗದವರಿಂದ ಗಾನ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ.
ಡಿ. 12ರಂದು ರಾತ್ರಿ 12 ಗಂಟೆಯ ನಂತರ ಲಕ್ಷ ದೀಪೋತ್ಸವ ನಡೆಯಲಿದೆ. ಕೆಎಸ್ಆರ್ಟಿಸಿ ರಾಜ್ಯದ ವಿವಿಧ ಭಾಗಗಳಿಂದ ಧರ್ಮಸ್ಥಳಕ್ಕೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ. ಡಿ. 8ರಂದು ಹೊಸ ಕಟ್ಟೆ ಉತ್ಸವ, ಡಿ. 9ರಂದು ಕೆರೆಕಟ್ಟೆ ಉತ್ಸವ. ಡಿ. 10 ರಂದು ಲಲಿತೋದ್ಯಾನ ಉತ್ಸವ. ಡಿ. 11 ಕಂಚಿಮಾರು ಉತ್ಸವ, ಡಿ. 12ರಂದು ಗೌರಿಮಾರು ಕಟ್ಟೆ ಉತ್ಸವ, ಡಿ. 13 ರಂದು ಸಂಜೆ 7ರಿಂದ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿ ಆವರಣದಲ್ಲಿ ಸಮವಸರಣ ಪೂಜೆ ನಡೆಯಲಿದೆ.