ಕರ್ನಾಟಕ ಮೂಲದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ನಟ ರಣವೀರ್ ಸಿಂಗ್‌ರನ್ನು ವಿವಾಹವಾಗಿ ಸುಖ ದಾಂಪತ್ಯ ನಡೆಸುತ್ತಿದ್ದಾರೆ. ಅವರು ತಮ್ಮ ಖಾಸಗಿ ಬದುಕಿನ ಬಗ್ಗೆ ಕಿಂಚಿತ್ತೂ ಮಾಹಿತಿಯನ್ನು ಹಂಚಿಕೊಳ್ಳಲು ಅಷ್ಟಾಗಿ ಇಷ್ಟಪಡಲ್ಲ.
ಕಳೆದ ವರ್ಷ ಮೇನಲ್ಲಿ ದೀಪಿಕಾ ಅವರ ಕುಟುಂಬದ ಎಲ್ಲ ಸದಸ್ಯರು ಕೋವಿಡ್-19 ಸೋಂಕಿಗೆ ತುತ್ತಾಗಿದ್ದರು. ತಂದೆ ಹಾಗೂ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ, ತಾಯಿ ಉಜ್ಜಲಾ, ಸೋದರಿ ಅನಿಶಾ ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ಕೆಲವು ದಿನಗಳವರೆಗೆ ಅವರು ಕೊರೊನಾ ರೋಗಲಕ್ಷಣಗಳಿಂದ ಬಳಲಿ ಸುಸ್ತಾಗಿದ್ದರು. ಈ ವಿವರಗಳನ್ನು ದೀಪಿಕಾ ಅವರೇ ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
’’ಕೊರೊನಾ ಸೋಂಕಿನಿಂದ ದೀರ್ಘಾವಧಿ ಬಳಿಕ ಚೇತರಿಸಿಕೊಂಡೆ. ಸ್ಟಿರಾಯ್ಡ್ಸ್, ಇತರ ಮಾತ್ರೆಗಳ ಪರಿಣಾಮವಾಗಿ ನನ್ನ ದೇಹದಲ್ಲಿ ಬದಲಾವಣೆ ಆಗಿತ್ತು. ನನ್ನನ್ನು ನಾನೇ ಗುರುತು ಹಿಡಿಯಲು ಆಗುತ್ತಿರಲಿಲ್ಲ. ಹಾಗಾಗಿ ಕೊರೊನಾ ಎಂದರೆ ನನಗೆ ಬಹಳ ಜಿಗುಪ್ಸೆ. ಕೊರೊನಾ ಬಳಿಕ ಕೆಲಸಕ್ಕೆ ಪುನಃ ಹಾಜರಾಗಲು ನನಗೆ 2 ತಿಂಗಳು ಬೇಕಾಯ್ತು. ಯಾಕೆಂದರೆ ನನ್ನ ಮಿದುಳು ಚುರುಕಾಗಿ ಕೆಲಸ ಮಾಡುವುದನ್ನೇ ನಿಲ್ಲಿಸಿತ್ತು. ತಲೆಯಲ್ಲಿ ಶೀಘ್ರ ಹಾಗೂ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕುಂಠಿತವಾಗಿತ್ತು. ಕೊರೊನಾ ಸೋಂಕಿನಿಂದ ನರಳಿದ್ದು ನನಗೆ ಬಹಳ ಕಷ್ಟದ ಕಾಲ’’ ಎಂದು ದೀಪಿಕಾ ಹೇಳಿಕೊಂಡಿದ್ದಾರೆ.
ಪತಿ ರಣವೀರ್ ಸಿಂಗ್ ಅವರ ಹೊಸ ಸಿನಿಮಾ ’83’ಯಲ್ಲಿ ಕಾಣಿಸಿಕೊಂಡಿರುವ ದೀಪಿಕಾ ಅವರು, ಹೃತಿಕ ರೋಷನ್ ಜತೆಗೆ ‘ಫೈಟರ್’ ಹಾಗೂ ಶಾರುಖ್ ಖಾನ್ ಮತ್ತು ಜಾನ್ ಅಬ್ರಹಾಂ ಜತೆಗೆ ‘ಪಠಾಣ್ ‘ ಸಿನಿಮಾದ ಶೂಟಿಂಗ್‌ನಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. ಯುವ ಜೋಡಿ ಸಿದ್ಧಾಂತ್-ಅನನ್ಯಾ ಪಾಂಡೆ ಜತೆಗೆ ’ಗೆಹರಾಯಿಯಾನ್’ ನಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರೆ.
https://www.instagram.com/p/CW-3cyCgk_p/?utm_source=ig_embed&ig_rid=f2a69f04-d042-4fea-b0f6-1430d9f44fe8