ʼಪಠಾಣ್ʼ ಚಿತ್ರದ ಬೇಶರಂ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಧರಿಸಿದ್ದು ದೊಡ್ಡ ವಿವಾದವನ್ನು ಹುಟ್ಟುಹಾಕಿತ್ತು. ರಾಜಕೀಯ ಪಕ್ಷಗಳ ನಾಯಕರೂ ಸಹ ದೀಪಿಕಾ ಅವರ ಬಿಕಿನಿ ಬಣ್ಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು, ಚಿತ್ರದಲ್ಲಿ ಅದನ್ನು ಸರಿಪಡಿಸುವಂತೆ ತಾಕೀತು ಮಾಡಿದ್ದರು.
ವಿವಾದಗಳ ಮಧ್ಯೆಯೂ ದೀಪಿಕಾ ಮತ್ತು ಶಾರುಖ್ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದು, ಇದೀಗ ಇದೇ ಮೊದಲ ಬಾರಿಗೆ ದೀಪಿಕಾ ಪಡುಕೋಣೆ ಈ ಕುರಿತಂತೆ ಮಾತನಾಡಿದ್ದಾರೆ.
ʼಇಂಡಿಯಾ ಟುಡೇʼ ಸಂದರ್ಶನದಲ್ಲಿ ದೀಪಿಕಾ ಅವರನ್ನು ಈ ಕುರಿತು ಕೇಳಿದಾಗ “ನಮಗೆ ಬೇರೆ ಯಾವುದೇ ಮಾರ್ಗ ತಿಳಿದಿರಲಿಲ್ಲ. ಕೇವಲ ಕನಸು ಮತ್ತು ಆಕಾಂಕ್ಷೆಗಳೊಂದಿಗೆ ನಾವು ಇಲ್ಲಿಗೆ (ಮುಂಬೈಗೆ) ಬಂದಿದ್ದೇವೆ. ನಮಗೆ ತಿಳಿದಿರುವುದು ಬದ್ಧತೆ, ಕಠಿಣ ಪರಿಶ್ರಮ ಮತ್ತು ನಮ್ರತೆ, ಮತ್ತು ಅದು ನಮ್ಮನ್ನು ಇಂದು ಇಲ್ಲಿಗೆ ತಲುಪಿಸಿದೆ. ಅದರಲ್ಲಿ ಕೆಲವು ಅನುಭವ ಮತ್ತು ಪ್ರಬುದ್ಧತೆಯೊಂದಿಗೆ ಬರುತ್ತದೆ. ನಾವಿಬ್ಬರೂ ಕ್ರೀಡಾಪಟುಗಳು. ಶಾರೂಖ್ ಶಾಲೆ ಮತ್ತು ಕಾಲೇಜಿನಲ್ಲಿ ಕ್ರೀಡೆಗಳನ್ನು ಆಡುತ್ತಿದ್ದರು. ಕ್ರೀಡೆಯು ಸಂಯಮದ ಬಗ್ಗೆ ನಿಮಗೆ ಬಹಳಷ್ಟು ಕಲಿಸುತ್ತದೆ ಎಂದಿದ್ದಾರೆ.
ಶಾರುಖ್ ಜೊತೆಗಿನ ತಮ್ಮ ಆನ್-ಸ್ಕ್ರೀನ್ ಕೆಮಿಸ್ಟ್ರಿ ಬಗ್ಗೆ ಮಾತನಾಡಿರುವ ದೀಪಿಕಾ, “15 ವರ್ಷಗಳ ಹಿಂದೆ, ಅವರಂತಹ ಸೂಪರ್ ಸ್ಟಾರ್ ಚಿತ್ರರಂಗದಲ್ಲಿ ಯಾವುದೇ ಅನುಭವ ಹೊಂದಿರದ ನನ್ನ ಮೇಲೆ ನಂಬಿಕೆ ಇರಿಸಿದರು ಮತ್ತು ಆಡಿಷನ್ ಇಲ್ಲದೆ ನನ್ನನ್ನು ಆಯ್ಕೆ ಮಾಡಿಕೊಂಡಿದ್ದರು. ಮೊದಲ ಚಿತ್ರದಲ್ಲೇ ದ್ವಿಪಾತ್ರದಲ್ಲಿ ನಟಿಸಿದ್ದು ಅದ್ಬುತ ಅನುಭವ ನೀಡಿತ್ತು ಎಂದು ಹೇಳಿದ್ದಾರೆ.
ಇನ್ನು ʼಪಠಾಣ್ʼ ಬಾಕ್ಸ್ ಆಫೀಸ್‌ನಲ್ಲಿ ಎಲ್ಲಾ ದಾಖಲೆಗಳನ್ನು ಮುರಿದಿದ್ದು, ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರ ಭಾರತದಲ್ಲಿ 526 ಕೋಟಿ ರೂಪಾಯಿ ಮತ್ತು ಜಾಗತಿಕವಾಗಿ 1022 ಕೋಟಿ ರೂಪಾಯಿಗಳನ್ನು ಗಳಿಸಿ ಕಮಾಲ್ ಮಾಡಿದೆ.