ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದಲ್ಲಿ ಪಟಾಕಿ ಸಿಡಿಸಲು ಹೋದ ಅದೆಷ್ಟೋ ಜನರ ಬಾಳಲ್ಲೇ ಕತ್ತಲು ಆವರಿಸಿದೆ. ಪಟಾಕಿ ಕಿಡಿ ತಗುಲಿ ಹಲವರು ಗಾಯಗೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ದೀಪಾವಳಿ ಹಬ್ಬ ಆರಂಭವಾದಾಗಿನಿಂದ ಇಲ್ಲಿಯವರೆಗೆ ಭಾನುವಾರದಿಂದ ಈವರೆಗೆ ರಾಜಧಾನಿ ಬೆಗಳೂರಿನಲ್ಲಿ 60ಕ್ಕೂ ಹೆಚ್ಚು ಜನರು ಪಟಾಕಿ ಅವಾಂತರದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾಯಾಳುಗಳ ಪೈಕಿ ಮಿಂಟೋ ಆಸ್ಪತ್ರೆಗೆ ದಾಖಲಾಗಿರುವ ಮೂವರ ಕಣ್ಣಿನ ಸ್ಥಿತಿ ಗಂಭೀರವಾಗಿದ್ದು, ಮೂವರು ಒಂದು ದೃಷ್ಟಿಯನ್ನೇ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಬೆಂಗಳೂರಿನ ಶ್ರೀರಾಂಪುರದ 18 ವರ್ಷದ ಯುವಕ, ಧರ್ಮಾವರಂ ನ 10 ಬಾಲಕಿ ಹಾಗೂ 22 ವರ್ಷದ ಯುವತಿ ಮೂವರಿಗೂ ಪಟಾಕಿಯಿಂದ ಕಣ್ಣಿಗೆ ಗಂಭೀರ ಗಾಯಗಳಾಗಿದ್ದು, ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಮೂವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ದೀರ್ಘಾವಧಿ ಚಿಕಿತ್ಸೆ ಅಗತ್ಯವಿದೆ ಎಂದು ಮಿಂಟೋ ಆಸ್ಪತ್ರೆ ನಿರ್ದೇಶಕ ಜಿ.ನಾಗರಾಜು ತಿಳಿಸಿದ್ದಾರೆ.
ಮಂಗಳವಾರ ಒಂದೇ ದಿನ ಬೆಂಗಳೂರಿನಲ್ಲಿ ಪಟಾಕಿ ಅವಘಡದಲ್ಲಿ 13 ಜನರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಮಿಂಟೋದಲ್ಲಿ ಒಟ್ಟು 9 ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನ.12ರಂದು ಬಿಹಾರ ಮೂಲದ 6 ವರ್ಷದ ಬಾಲಕ ಪಟಾಕಿ ಸಿಡಿದು ಗಾಯಗೊಂಡಿದ್ದು, ಆತನನ್ನು ನಾರಾಯಣ ನೇತ್ರಾಲಯಕ್ಕೆ ಶಿಫ್ಟ್ ಮಾಡಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದಲ್ಲಿ ಪಟಾಕಿ ಸಿಡಿಸಲು ಹೋಗಿ ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.