ಬೆಂಗಳೂರು: ಸಾರಿಗೆ ಇಲಾಖೆ ಎಚ್ಚರಿಕೆ ನಡುವೆಯೂ ಖಾಸಗಿ ಬಸ್ ಗಳು ದೀಪಾವಳಿಗೆ ಊರಿಗೆ ಹೊರಟ ಪ್ರಯಾಣಿಕರಿಂದ ಸುಲಿಗೆಗೆ ಇಳಿದಿವೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬೇಕಾಬಿಟ್ಟಿಯಾಗಿ ಪ್ರಯಾಣದರ ಹೆಚ್ಚಳ ಮಾಡದಂತೆ ತಡೆಯಲು ಕಳೆದ ವಾರವೇ ಸಾರಿಗೆ ಇಲಾಖೆಯಿಂದ ಖಾಸಗಿ ಬಸ್ ಮಾಲೀಕರ ಸಭೆ ನಡೆಸಿ ಸೂಚನೆ ನೀಡಲಾಗಿದೆ. ಹೀಗಿದ್ದರೂ ಖಾಸಗಿ ಬಸ್ ಗಳಲ್ಲಿ ದರ ಹೆಚ್ಚಳ ಮಾಡಿದ್ದು, ಪ್ರಯಾಣಿಕರಿಗೆ ಹೊರೆಯಾಗಿ ಪರಿಣಮಿಸಿದೆ. ಎರಡರಿಂದ ಮೂರು ಪಟ್ಟು ಬಸ್ ಪ್ರಯಾಣದರ ಹೆಚ್ಚಾಗಿದ್ದು, ವಿಮಾನ ಪ್ರಯಾಣದ ಸಮೀಪಕ್ಕೆ ಬಂದಿದೆ.
ಅಕ್ಟೋಬರ್ 29, 30ರಂದು ಖಾಸಗಿ ಬಸ್ ಪ್ರಯಾಣದರ ಬೆಂಗಳೂರಿನಿಂದ ವಿವಿಧ ನಗರಗಳಿಗೆ ಸ್ಲೀಪರ್ ಬಸ್ ಗಳಲ್ಲಿ ಬಲು ದುಬಾರಿಯಾಗಿದೆ. ಸಾಮಾನ್ಯ ದಿನಗಳಲ್ಲಿ ಬೆಂಗಳೂರು ಮಡಿಕೇರಿಗೆ 500 -600 ರೂ. ಇದ್ದು, ಈಗ 1000-1700 ರೂಪಾಯಿವರೆಗೆ ತಲುಪಿದೆ.
ಬೆಂಗಳೂರು -ಶಿವಮೊಗ್ಗಕ್ಕೆ 600 ರಿಂದ 800 ರೂ. ಇದ್ದ ದರ ಈಗ ಒಂದು 1500 ನಿಂದ 3000 ರೂ.ಗೆ ಹೆಚ್ಚಳ ಮಾಡಲಾಗಿದೆ. ಬೆಂಗಳೂರು- ಮಂಗಳೂರು ಟಿಕೆಟ್ ದರ 800 ರಿಂದ 1,200 ರೂ.ಇದ್ದು ಈಗ 2 ಸಾವಿರದಿಂದ 3000 ರೂ. ವರೆಗೆ ಹೆಚ್ಚಳ ಮಾಡಲಾಗಿದೆ. ಬೆಂಗಳೂರಿನಿಂದ ಧಾರವಾಡಕ್ಕೆ 800 ರಿಂದ 1,200 ರೂ. ಇದ್ದು ಈಗ 2300 ರಿಂದ 3500 ರೂ. ವರೆಗೂ ಹೆಚ್ಚಳ ಮಾಡಲಾಗಿದೆ.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವಿಮಾನ ಪ್ರಯಾಣದರ 2600 ರೂ.ನಿಂದ 2700 ರೂ., ಹುಬ್ಬಳ್ಳಿಗೆ 4000 ರೂ., ಮಂಗಳೂರಿಗೆ 2900 ರಿಂದ 3000 ರೂ., ಕಲಬುರ್ಗಿಗೆ 4,400 ರೂ., ಬೆಳಗಾವಿಗೆ 4350 ರಿಂದ 4500 ರೂ. ಟಿಕೆಟ್ ದರ ಇದೆ. ಇದೀಗ ದೀಪಾವಳಿ ಸಂದರ್ಭದಲ್ಲಿ ಖಾಸಗಿ ಬಸ್ ಗಳ ಪ್ರಯಾಣದ ದರ ಕೂಡ ವಿಮಾನ ಪ್ರಯಾಣ ದರಕ್ಕೆ ಸಮೀಪದಲ್ಲಿ ಇದೆ.