ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆ ಜನ ಬೆಂಗಳೂರಿನಿಂದ ಊರಿಗೆ ತೆರಳುತ್ತಿದ್ದು, ಟೌನ್ ಹಾಲ್ ಕಾರ್ಪೊರೇಷನ್, ಕೆಆರ್ ಮಾರ್ಕೆಟ್, ಮೆಜೆಸ್ಟಿಕ್, ಜೇಸಿ ರಸ್ತೆ, ಮೈಸೂರು ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಗಾಂಧಿನಗರ ಸುತ್ತಮುತ್ತ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಳೆದ 2 ಗಂಟೆಯಿಂದಲೂ ವಾಹನ ಸಂಚಾರ ಮಂದಗತಿಯಲ್ಲಿ ಸಾಗಿದೆ. ಟ್ರಾಫಿಕ್ ಜಾಮ್ ಹಿನ್ನಲೆಯಲ್ಲಿ ಎಲ್ಲೆಂದರಲ್ಲಿ ಬೈಕ್ ಸವಾರರು ಯುಟರ್ನ್ ತೆಗೆದುಕೊಳ್ಳುತ್ತಿದ್ದಾರೆ. ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಎಐ ಸಿಗ್ನಲ್ ಗಳು ಕೆಲಸಕ್ಕೆ ಬಾರದಂತಾಗಿದೆ. ವಾಹನಗಳ ಸಂಚಾರ ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ಹರಸಾಹಸ ನಡೆಸಿದ್ದಾರೆ.
ಮೆಜೆಸ್ಟಿಕ್ ನಲ್ಲಿ ಭಾರೀ ಜನಸಂದಣಿ: ಬಸ್ ಸೀಟು ಹಿಡಿಯಲು ನೂಕುನುಗ್ಗಲು
ಮೆಜೆಸ್ಟಿಕ್ ಕೆಎಸ್ಆರ್ಟಿಸಿ ಟರ್ಮಿನಲ್ 1, 2, 3ರಲ್ಲಿ ಜನಸಂದಣಿ ಭಾರಿ ಉಂಟಾಗಿದೆ. ದೀಪಾವಳಿ ಹಬ್ಬ, ಸಾಲು ಸಾಲು ರಜೆ ಹಿನ್ನೆಲೆ ರಾತ್ರಿ 9 ಗಂಟೆ ಆಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸಿದ್ದಾರೆ. ನಿಲ್ದಾಣಕ್ಕೆ ಬಸ್ ಗಳು ಬರುತ್ತಿದ್ದಂತೆ ಸೀಟು ಹಿಡಿಯಲು ಪರದಾಟ ನಡೆಸಿದ್ದಾರೆ. ಕಿಟಕಿಗಳ ಮೂಲಕ ಬ್ಯಾಗ್ ಹಾಕಿ ಪ್ರಯಾಣಿಕರು ಸೀಟು ಹಿಡಿಯುತ್ತಿದ್ದಾರೆ.
ಈಗಾಗಲೇ ಹೆಚ್ಚುವರಿಯಾಗಿ 2,000 ಕೆಎಸ್ಆರ್ಟಿಸಿ ಬಸ್ ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು ಮತ್ತು ನಾಳೆ ಬಿಎಂಟಿಸಿಯಿಂದ 800 ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದರೆ ಮತ್ತಷ್ಟು ಬಸ್ ಳನ್ನು ಬಿಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.