ಪಾಟ್ನಾ: ಬಿಹಾರದ ಬಂಕಾ ಜಿಲ್ಲೆಯ ಕಾಡಿನಲ್ಲಿ 16 ವರ್ಷದ ಬಾಲಕಿ ಮತ್ತು ಆಕೆಯ ಸೋದರಸಂಬಂಧಿ ಆಗಿರುವ 18 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಂಕಾ ಜಿಲ್ಲೆಯ ಕಟೋರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಬಡಾಸನ್ ಗ್ರಾಮದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಸಂಬಂಧದಲ್ಲಿ ಅಣ್ಣ-ತಂಗಿಯಾಗಿದ್ದರೂ ಇವರ ನಡುವೆ ಪ್ರೀತಿ ಬೆಳೆದೆತ್ತು. ಈ ವಿಚಾರ ಕುಟುಂಬದವರಿಗೆ ಗೊತ್ತಾಗಿದೆ. ಆರು ತಿಂಗಳ ಹಿಂದೆ ಇಬ್ಬರ ವಿಚಾರ ಮನೆಯವರಿಗೆ ಗೊತ್ತಾಗಿ ಯುವಕನನ್ನು ಕೊಲ್ಕತ್ತಾಗೆ ಕಳುಹಿಸಲಾಗಿತ್ತು. ಬಾಲಕಿಯನ್ನು ಆಕೆಯ ಮಾವನ ಮನೆಗೆ ಕಳುಹಿಸಲಾಗಿದೆ.
ಬಡಾಸನ್ ನಲ್ಲಿ ಬಾಲಕಿಯ ಕುಟುಂಬದವರ ಮದುವೆ ನಡೆದಿದ್ದು ಆಕೆ ಊರಿಗೆ ಮರಳಿದ್ದಳು. ಈ ವಿಚಾರ ತಿಳಿದ ಯುವಕ ಕೂಡ ಮೂರು ದಿನಗಳ ಹಿಂದೆ ಕೊಲ್ಕತ್ತಾದಿಂದ ಊರಿಗೆ ಬದಲಿಗೆ ಹೋಗಿದ್ದು, ಶನಿವಾರ ರಾತ್ರಿ ಇಬ್ಬರು ಮನೆಯಿಂದ ಹೊರಗೆ ಹೋಗಿದ್ದಾರೆ. ಸಮೀಪದ ಕಾಡಿನಲ್ಲಿ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಟೋರಿಯಾ ಠಾಣಾಧಿಕಾರಿ ನೀರಜ್ ತಿವಾರಿ ಅವರು ನೀಡಿರುವ ಮಾಹಿತಿಯಂತೆ, ಭಾನುವಾರ ಬೆಳಿಗ್ಗೆ ಗ್ರಾಮದ ಹೊರವಲಯದಲ್ಲಿರುವ ಕಾಡಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಸೋದರ ಸಂಬಂಧಿಗಳ ಮೃತದೇಹ ಕಂಡು ಬಂದಿದೆ. ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಹುಡುಗಿ ಮತ್ತು ಯುವಕನ ಕುಟುಂಬದವರು ಪರಸ್ಪರರ ವಿರುದ್ಧ ಯಾವುದೇ ಆರೋಪ ಮಾಡಿಲ್ಲ. ಬಾಲಕಿಯ ತಂದೆ ದೂರು ನೀಡಿದ್ದು, ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಪ್ರಬುದ್ಧತೆ ಇಲ್ಲದ ಕಾರಣ ಮಕ್ಕಳು ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.