ಬೆಂಗಳೂರು: ಯಾವುದೇ ಸಂರಕ್ಷಿತ ಅರಣ್ಯ ವನ್ಯಜೀವಿಧಾಮಗಳ ಸುತ್ತಲಿನ ನಿರ್ದಿಷ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆ ಮಾಡುವುದರಿಂದ ಆ ಪ್ರದೇಶದಲ್ಲಿನ ಜನರನ್ನು ಒಕ್ಕಲಿಬ್ಬಿಸುವುದಿಲ್ಲ. ಜನಜೀವನ, ಕೃಷಿ, ಪ್ರವಾಸೋದ್ಯಮಕ್ಕೆ ಯಾವುದೇ ತೊಂದರೆ ಇಲ್ಲ. ಈ ಕುರಿತಾಗಿ ಯಾವುದೇ ಆತಂಕ ಬೇಡ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧ್ಯಕ್ಷತೆಯ ಸಂಪುಟ ಸಮಿತಿ ಸಭೆಯಲ್ಲಿ ಕಪ್ಪತಗುಡ್ಡ, ನಾಗರಹೊಳೆ, ಬುಕ್ಕಾಪಟ್ಟಣ, ಕಾವೇರಿ ವಿಸ್ತರಿತ ವನ್ಯಜೀವಿಧಾಮ ಸೇರಿದಂತೆ ರಾಜ್ಯದ ಆರು ಅರಣ್ಯ ಪ್ರದೇಶಗಳಲ್ಲಿ ಪರಿಸರ ಸೂಕ್ಷ್ಮ ವಲಯ ಘೋಷಣೆ ಮಾಡಲು ರಾಜ್ಯ ಸಚಿವ ಸಂಪುಟಕ್ಕೆ ಶಿಫಾರಸು ಮಾಡಲು ತೀರ್ಮಾನಿಸಲಾಗಿದೆ.
ಸಂಪುಟದ ನಿರ್ಧಾರ ಬಳಿಕ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಿದ್ದು, ಇದು ಜಾರಿಯಾದಲ್ಲಿ ವನ್ಯಜೀವಿಧಾಮಗಳ ಸುತ್ತಲಿನ ಒಂದು ಕಿಲೋಮೀಟರ್ ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ವಲಯ ಎಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ ಆ ಪ್ರದೇಶದ ನಿವಾಸಿಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಜನರನ್ನು ಒಕ್ಕಲೆಬ್ಬಿಸುವುದಿಲ್ಲ. ಕೃಷಿ ಹಾಗೂ ಹಾಲಿ ಇರುವ ಚಟುವಟಿಕೆಗಳಿಗೆ ಸಮಸ್ಯೆಯಾಗುವುದಿಲ್ಲ ಎಂದು ಹೇಳಲಾಗಿದೆ.
ಪರಿಸರ ಸೂಕ್ಷ್ಮ ವಲಯ ಘೋಷಣೆಯಾದರೆ ಆ ವ್ಯಾಪ್ತಿಯಲ್ಲಿ ಗಣಿಗಾರಿಕೆ, ಕ್ರಷರ್ ಘಟಕ, ಹೋಂ ಸ್ಟೇ, ರೆಸಾರ್ಟ್, ರಸ್ತೆ ಅಗಲೀಕರಣ, ಮರಗಳ ಕಡಿತ ಸೇರಿದಂತೆ ವನ್ಯಜೀವಿ, ಅರಣ್ಯದ ಮೇಲೆ ಪರಿಣಾಮ ಬೀರುವ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗುತ್ತದೆ. ಉಳಿದಂತೆ ಹಾಲಿ ವಾಸವಾಗಿರುವ ಜನಜೀವನ ಕೃಷಿ, ವ್ಯಾಪಾರ ಮತ್ತಿತರ ಜೀವನೋಪಾಯ ಚಟುವಟಿಕೆಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಶಾಲೆ, ಸಾರಿಗೆ, ಆಸ್ಪತ್ರೆ ಮೊದಲಾದ ಅಗತ್ಯ ಚಟುವಟಿಕೆಗಳು ಯಥಾಸ್ಥಿತಿಯಲ್ಲಿ ಇರುತ್ತವೆ. ಸರ್ಕಾರದ ಅನುಮತಿಯೊಂದಿಗೆ ನಿರ್ದಿಷ್ಟ ಪ್ರದೇಶದಲ್ಲಿ ಜಂಗಲ್ ರೆಸಾರ್ಟ್ ಸೇರಿದಂತೆ ಪ್ರವಾಸೋದ್ಯಮ ಅಭಿವೃದ್ಧಿ ಪೂರಕ ಚಟುವಟಿಕೆಗಳಿಗೆ ಅವಕಾಶ ಪಡೆಯಬಹುದಾಗಿದೆ.