ಶ್ರೀನಗರ: ಮರಣಹೊಂದಿದೆ ಎಂದು ಆಸ್ಪತ್ರೆಯಲ್ಲಿ ಘೋಷಿಸಲಾಗಿದ್ದ ನವಜಾತ ಶಿಶುವಿಗೆ ಜೀವ ಬಂದ ಘಟನೆ ನಡೆದಿದೆ. ಸೋಮವಾರ ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಬನಿಹಾಲ್ ಉಪ ಜಿಲ್ಲಾ ಆಸ್ಪತ್ರೆಯಲ್ಲಿ ನವಜಾತ ಶಿಶು ಸಾವನ್ನಪ್ಪಿದೆ ಎಂದು ಘೋಷಿಸಲಾಗಿದ್ದು, ನಂತರ ಕುಟುಂಬ ಸದಸ್ಯರು ಸಮಾಧಿ ಮಾಡಲು ಶಿಶುವನ್ನು ತೆಗೆದುಕೊಂಡು ಹೋಗುವಾಗ ಜೀವಂತವಾಗಿರುವುದು ಕಂಡುಬಂದಿದೆ.
ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದ ವಿರುದ್ಧ ಆಕ್ರೋಶಗೊಂಡ ಮಗುವಿನ ಕುಟುಂಬ ಸದಸ್ಯರು ಆಸ್ಪತ್ರೆಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಘಟನೆಯನ್ನು ಗಮನಿಸಿದ ಅಧಿಕಾರಿಗಳು ಶಿಶುವಿನ ಕುಟುಂಬದವರ ಪ್ರತಿಭಟನೆಯ ನಂತರ ಇಬ್ಬರು ಆಸ್ಪತ್ರೆಯ ನೌಕರರನ್ನು ಅಮಾನತುಗೊಳಿಸಿದ್ದಾರೆ.
ಬಂಕೂಟ್ ನಿವಾಸಿ ಬಶರತ್ ಅಹ್ಮದ್ ಅವರ ಪತ್ನಿಗೆ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿದ್ದು, ನಂತರ ಆಸ್ಪತ್ರೆಯ ಸಿಬ್ಬಂದಿ ಮಗು ಸತ್ತಿದೆ ಎಂದು ಕುಟುಂಬಕ್ಕೆ ತಿಳಿಸಿದರು. ಬಳಿಕ ಕುಟುಂಬಸ್ಥರು ಮಗುವನ್ನು ಅಂತ್ಯಸಂಸ್ಕಾರಕ್ಕೆ ಕೊಂಡೊಯ್ದಿದ್ದಾರೆ.
ಆದರೆ ಕುಟುಂಬದ ಸದಸ್ಯರು ಮಗು ಅಲುಗಾಡುತ್ತಿರುವುದನ್ನು ಗಮನಿಸಿ ಇತರರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಮಗುವನ್ನು ಮತ್ತೆ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿಂದ ವಿಶೇಷ ಚಿಕಿತ್ಸೆಗಾಗಿ ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಠಾಣಾಧಿಕಾರಿ ಬನಿಹಾಲ್ ಮುನೀರ್ ಖಾನ್ ನೇತೃತ್ವದ ಪೊಲೀಸ್ ತಂಡವು ಆಸ್ಪತ್ರೆಗೆ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದ್ದಾರೆ. ನಿರ್ಲಕ್ಷ್ಯಕ್ಕೆ ತಪ್ಪಿತಸ್ಥರೆಂದು ಕಂಡುಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.