
ಬೆಂಗಳೂರು: ಕನ್ನಡ ಮಾಧ್ಯಮ ಖಾಸಗಿ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ರಾಜ್ಯದ ಖಾಸಗಿ ಶಾಲೆಗಳಲ್ಲಿ ಕರಾಳ ದಿನ ಆಚರಿಸಲು ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘ ನಿರ್ಣಯ ಕೈಗೊಂಡಿದೆ.
ರಾಜ್ಯದ ಸುಮಾರು 350 ಶಾಲೆಗಳ ಆಡಳಿತ ಮಂಡಳಿ ಸಭೆ ನಡೆಸಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ.
1995 ರ ನಂತರ ಆರಂಭವಾದ ಖಾಸಗಿ ಕನ್ನಡ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವಂತೆ ಅನೇಕ ವರ್ಷಗಳಿಂದ ಬೇಡಿಕೆ ಇದೆ. ಆದರೆ, ಸರ್ಕಾರಗಳು ಇದಕ್ಕೆ ಮನ್ನಣೆ ನೀಡಿಲ್ಲ. ದಶಕಗಳ ಕಾಲ ಪಾಠ ಮಾಡಿದ ಶಿಕ್ಷಕರು ಅನುದಾನದ ವೇತನ ಇಲ್ಲದೆ ನಿವೃತ್ತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ನವೆಂಬರ್ 1ರ ರಾಜ್ಯೋತ್ಸವದಂದು ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು ಕಪ್ಪುಪಟ್ಟಿ ಧರಿಸಿ ಕರಾಳ ದಿನ ಆಚರಿಸಲಿದ್ದಾರೆ. ಶಾಲೆಗಳಿಗೆ ಮಾನ್ಯತೆ ನವೀಕರಣ, ಆರ್‌ಟಿಇಗೆ ಚಾಲನೆ, ಆರ್‌ಟಿಇ ಶುಲ್ಕ ಮರುಪಾವತಿ, ಗ್ರಾಚ್ಯುಟಿ ಪಾವತಿ ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ನ್ಯಾಯ ಪಡೆಯಲು ಕೋರ್ಟ್ ಮೊರೆ ಹೋಗಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.