ಬೆಂಗಳೂರು: ಬಳ್ಳಾರಿ ಸಮೀಪ ಜಿಂದಾಲ್ ಕಂಪನಿಗೆ 2006ರಲ್ಲಿ ಗುತ್ತಿಗೆ ಮತ್ತು ಮಾರಾಟದ ಆಧಾರದ ಮಂಜೂರು ಮಾಡಿದ್ದ 3667.31 ಎಕರೆ ಜಮೀನನ್ನು ಜಿಂದಾಲ್ ಕಂಪನಿಗೆ ಶುದ್ಧ ಕ್ರಯ ಮಾಡಿಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಈ ಹಿಂದೆ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಜಿಂದಾಲ್ ಸಂಸ್ಥೆಗೆ ಈ ಜಮೀನು ಶುದ್ಧ ಕ್ರಮ ಮಾಡಿಕೊಡಲು ಯತ್ನಿಸುವುದು, ಆಗ ವಿರೋಧ ಪಕ್ಷ ಸ್ಥಾನದಲ್ಲಿದ್ದ ಪಕ್ಷಗಳು ವಿರೋಧಿಸುವುದು ನಡೆದಿತ್ತು. ಈಗ ಕಾಂಗ್ರೆಸ್ ಸರ್ಕಾರ ಹಳೆಯ ನಿಲುವು ಬದಲಿಸಿ ಜಿಂದಾಲ್ ಗೆ ಜಮೀನು ನೀಡಲು ನಿರ್ಧಾರ ಕೈಗೊಂಡಿದೆ.
ಸಂಡೂರು ತಾಲೂಕಿನ ತೋರಣಗಲ್ಲು ಮತ್ತು ಕುರೇಕೊಪ್ಪ ಸಮೀಪ 2 ಸಾವಿರ ಎಕರೆ ಜಮೀನಿಗೆ ಪ್ರತಿ ಎಕರೆಗೆ 1.22 ಲಕ್ಷ ರೂ.ನಂತೆ, ತೋರಣಗಲ್ಲು, ಮುಸೇನಾಕನಹಳ್ಳಿ. ಯಾರಬನಹಳ್ಳಿ ಗ್ರಾಮಗಳ 1566 ಎಕರೆ ಜಮೀನಿಗೆ ಪ್ರತಿ ಎಕರೆಗೆ 1.50 ರೂ.ನಂತೆ ದರ ನಿಗದಿ ಮಾಡಿ ಶುದ್ಧಕ್ರಯಕ್ಕೆ ನೀಡಲು ನಿರ್ಧರಿಸಲಾಗಿದೆ.
ಜಿಂದಾಲ್ ಸ್ಟೀಲ್ ಕಂಪನಿಗೆ 2006ರ ಫೆಬ್ರವರಿಯಲ್ಲಿ ಸರ್ಕಾರ ಜಮೀನು ಮಂಜೂರು ಮಾಡಿದ್ದು, ಈ ಸಂಬಂಧ ಕಂಪನಿ ಆಗ 18.10 ಕೋಟಿ ರೂ., 2007ರಲ್ಲಿ 41 ಕೋಟಿ ರೂ.ಗಳನ್ನು ಕೆಐಎಡಿಬಿ, ಕೆಪಿಸಿಎಲ್ ಗೆ ಪಾವತಿಸಲಾಗಿತ್ತು. ಈಗ ಜಮೀನನ್ನು ಶುದ್ಧಕ್ರಯಕ್ಕೆ ನೀಡಲಾಗಿದೆ. ವ್ಯತ್ಯಾಸದ ಮೊತ್ತವನ್ನು ಜಿಂದಾಲ್ ಭರಿಸಬೇಕು ಎಂದು ಷರತ್ತು ವಿಧಿಸಲಾಗಿದೆ.