ಗದಗ: ಹಣ ಡಬಲ್ ಮಾಡಿಕೊಡುವುದಾಗಿ ಹೇಳಿ ಜನರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ದೊಡ್ಡ ದೊಡ್ಡ ಚಿಟ್ ಫಂಡ್ ಕಂಪನಿಗಳೇ ಮಾಯವಾಗಿರುವ ಘಟನೆ ಗದಗದಲ್ಲಿ ನಡೆದಿದೆ.
ಕಷ್ಟ ಪಟ್ಟು ದುಡಿದ ದುಡ್ಡನ್ನೆಲ್ಲ ಕಷ್ಟ ಕಾಲಕ್ಕೆ, ಮಕ್ಕಳ ಭವಿಷ್ಯಕ್ಕೆ ಎಂದು ಬಡವರು, ರೈತರು ಚಿಟ್ ಫಂಡ್ ನಲ್ಲಿ ಹಣ ತೊಡಗಿಸಿ ಮೋಸ ಹೋಗಿದ್ದು, ಈಗ ಕಣ್ಣೀರಿಟ್ಟಿದ್ದಾರೆ. ಹಣ ಕಳೆದುಕೊಂಡ ಜನರು ಚಿಟ್ ಫಂಡ್ ಕಂಪನಿಗಳಿಂದ ಹಣ ವಾಪಸ್ ಕೊಡಿಸುವಂತೆ ಗದಗ ಜಿಲ್ಲಾಧಿಕಾರಿ ಕಚೇರಿ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗದಗದಲ್ಲಿ ಹೆಸರಾಂತ ಚಿಟ್ ಫಂಡ್ ಕಂಪನಿಗಳು ಜನರಿಗೆ ಹಾಗೂ ಏಜೆಂಟರಿಗೆ ಮೋಸ ಮಾಡಿ ಕಂಪನಿ ಬಾಗಿಲು ಮುಚ್ಚಿ ಮಾಯವಾಗಿದೆ. ಪಿಎಸಿ ಎಲ್ ಇಂಡಿಯಾ ಲಿಮಿಟೆಡ್, ಗರಿಮಾ, ಅಗ್ರೀಗೋಲ್ಡ್, ಸಾಯಿಪ್ರಸಾದ್ ಗ್ರೂಪ್, ಸಮೃದ್ಧ ಜೀವನ, ಕಲ್ಪತರು, ಸಂಜೀವಿನಿ, ನವಜೀವನ ಸೇರಿದಂತೆ 30ಕ್ಕೂ ಹೆಚ್ಚು ಚಿಟ್ ಫಂಡ್ ಕಂಪನಿಗಳು ಬಾಗಿಲು ಮುಚ್ಚಿದ್ದು, ಕಂಪನಿ ಸಿಬ್ಬಂದಿಗಳು ನಾಪತ್ತೆಯಾಗಿದ್ದಾರೆ.
ನೂರಾರು ಏಜೆಂಟ್ ರು ಕಮಿಷನ್ ಆಸೆಗಾಗಿ ಜನರಿಂದ ಹಣ ಪಡೆದು 6 ವರ್ಷಗಳಲ್ಲಿ ನಿಮ್ಮ ಹಣ ದಬಲ್ ಆಗುತ್ತೆ ಎಂದು ಆಸೆ ಹುಟ್ಟಿಸಿದ್ದಾರೆ. ಈಗ ಹೂಡಿಕೆ ಮಾಡಿದ ಹಣವೂ ಇಲ್ಲ, ಚಿಟ್ ಫಂಡ್ ಕಂಪನಿಯೂ ಇಲ್ಲವಾಗಿದೆ. ಇನ್ನೊಂದೆಡೆ ಹಣ ಕಳೆದುಕೊಂಡ ಜನರು ಏಜೆಂಟರಿಗೆ ತಮ್ಮ ಹಣ ವಾಪಸ್ ಕೊಡುವಂತೆ ದುಂಬಾಲು ಬಿದ್ದಿದ್ದಾರೆ.