ಅಕ್ಟೋಬರ್ 1 ರಿಂದ ಅನೇಕ ಹೊಸ ಬದಲಾವಣೆಯಾಗ್ತಿದೆ. ಇದು ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರಲಿದೆ. ಅಕ್ಟೋಬರ್ ತಿಂಗಳಿನಲ್ಲಿ ಬ್ಯಾಂಕ್ ಮತ್ತು ಸಂಬಳಕ್ಕೆ ಸಂಬಂಧಿಸಿದ ಹಲವು ನಿಯಮಗಳು ಬದಲಾಗಲಿವೆ.
ಪಿಂಚಣಿ ನಿಯಮಗಳಲ್ಲಿ ಬದಲಾವಣೆ : ಅಕ್ಟೋಬರ್ 1 ರಿಂದ, ಡಿಜಿಟಲ್ ಲೈಫ್ ಪ್ರಮಾಣಪತ್ರಕ್ಕೆ ಸಂಬಂಧಿಸಿದ ನಿಯಮಗಳು ಬದಲಾಗುತ್ತಿವೆ. ದೇಶದ ಎಲ್ಲಾ ಹಿರಿಯ ಪಿಂಚಣಿದಾರರು, 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು, ದೇಶದ ಎಲ್ಲಾ ಮುಖ್ಯ ಅಂಚೆ ಕಚೇರಿಯಲ್ಲಿರುವ ಜೀವನ್ ಪ್ರಮಾಣ ಕೇಂದ್ರದಲ್ಲಿ ಡಿಜಿಟಲ್ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು. ನವೆಂಬರ್ 30 ರವರೆಗೆ ಅವಕಾಶ ನೀಡಲಾಗಿದೆ.
ಹಳೆಯ ಚೆಕ್ ಬುಕ್ ರದ್ದು : ಮೂರು ಬ್ಯಾಂಕ್ ಗಳ ಚೆಕ್‌ಬುಕ್ ಗಳು ಮತ್ತು ಎಂಐಸಿಆರ್ ಕೋಡ್‌ಗಳು ಅಮಾನ್ಯವಾಗುತ್ತವೆ. ಈ ಬ್ಯಾಂಕುಗಳು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಅಲಹಾಬಾದ್ ಬ್ಯಾಂಕ್ ಚೆಕ್ ಬುಕ್ ರದ್ದಾಗಲಿದೆ. ಬ್ಯಾಂಕ್‌ಗಳ ವಿಲೀನದಿಂದಾಗಿ, ಖಾತೆದಾರರ ಖಾತೆ ಸಂಖ್ಯೆಗಳ ಬದಲಾವಣೆಯಿಂದಾಗಿ, ಐಎಫ್ ಎಸ್ ಸಿ ಮತ್ತು ಎಂಐಸಿಆರ್ ಕೋಡ್ ಅಕ್ಟೋಬರ್ 1 ರಿಂದ ಬದಲಾಗಲಿದೆ. ಹಳೆ ಚೆಕ್ ಬುಕ್ ಹೊಂದಿರುವವರು, ಬ್ಯಾಂಕ್ ಶಾಖೆಗೆ ಹೋಗಿ ಹೊಸ ಚೆಕ್ ಬುಕ್ ಗೆ ಅರ್ಜಿ ಸಲ್ಲಿಸಬೇಕು.
ಆಟೋ ಡೆಬಿಟ್ ಕಾರ್ಡ್ ನಿಯಮ : ಅಕ್ಟೋಬರ್ 1 ರಿಂದ ಆಟೋ ಡೆಬಿಟ್ ಕಾರ್ಡ್ ನಿಯಮದಲ್ಲಿ ಬದಲಾವಣೆಯಾಗಲಿದೆ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು ಅಥವಾ ಮೊಬೈಲ್ ವ್ಯಾಲೆಟ್‌ಗಳಿಂದ ಕೆಲವು ಆಟೋ ಡೆಬಿಟ್ ನಿಯಮ ಬದಲಾಗಿದೆ.
ಗ್ರಾಹಕರು ತಮ್ಮ ಒಪ್ಪಿಗೆ ನೀಡುವವರೆಗೂ ಆಟೋ ಡೆಬಿಟ್ ಆಗುವುದಿಲ್ಲ. ಪಾವತಿಗೆ 24 ಗಂಟೆ ಮೊದಲೇ ಗ್ರಾಹಕರಿಗೆ ಮಾಹಿತಿ ನೀಡಬೇಕು. ಗ್ರಾಹಕರು ಖಾತ್ರಿ ಮಾಡಿದಾಗ ಮಾತ್ರ ಅವರ ಖಾತೆಯಿಂದ ಹಣ ಡೆಬಿಟ್ ಆಗುತ್ತದೆ. ಅಧಿಸೂಚನೆಯನ್ನು ಎಸ್ಎಂಎಸ್ ಅಥವಾ ಇ-ಮೇಲ್ ಮೂಲಕ ನೀಡಬೇಕು.
ಹೂಡಿಕೆ ಸಂಬಂಧಿತ ನಿಯಮಗಳಲ್ಲಿ ಬದಲಾವಣೆ : ಮಾರುಕಟ್ಟೆ ನಿಯಂತ್ರಕ ಸೆಬಿ ಈಗ ಮ್ಯೂಚುವಲ್ ಫಂಡ್ ಹೂಡಿಕೆದಾರರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ನಿಯಮವನ್ನು ತಂದಿದೆ. ಈ ನಿಯಮವು ಅಸೆಟ್ ಅಂಡರ್ ಮ್ಯಾನೇಜ್‌ಮೆಂಟ್ ಅಂದರೆ ಮ್ಯೂಚುವಲ್ ಫಂಡ್ ಹೌಸ್‌ನಲ್ಲಿ ಕೆಲಸ ಮಾಡುವ ಕಿರಿಯ ಉದ್ಯೋಗಿಗಳಿಗೆ ಅನ್ವಯಿಸುತ್ತದೆ.
ಮ್ಯಾನೇಜ್‌ಮೆಂಟ್ ಕಂಪನಿಗಳ ಅಡಿಯಲ್ಲಿರುವ ಆಸ್ತಿಯ ಕಿರಿಯ ಉದ್ಯೋಗಿಗಳು ತಮ್ಮ ಒಟ್ಟು ಸಂಬಳದ ಶೇಕಡಾ 10 ಅನ್ನು ಮ್ಯೂಚುವಲ್ ಫಂಡ್‌ನ ಘಟಕಗಳಲ್ಲಿ ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ಹೂಡಿಕೆ ಮಾಡಬೇಕು. ಅಕ್ಟೋಬರ್ 2023 ರ ಹೊತ್ತಿಗೆ, ಹಂತ ಹಂತವಾಗಿ ಇದು ಸಂಬಳದ ಶೇಕಡಾ 20ರಷ್ಟಾಗಲಿದೆ.
ಎಲ್ಪಿಜಿ ಸಿಲಿಂಡರ್ ಬೆಲೆ : ಅಕ್ಟೋಬರ್ 1 ರಿಂದ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಬದಲಾವಣೆಯಾಗಲಿದೆ. ಪ್ರತಿ ತಿಂಗಳ ಮೊದಲ ದಿನ, ದೇಶೀಯ ಎಲ್‌ಪಿಜಿ ಮತ್ತು ವಾಣಿಜ್ಯ ಸಿಲಿಂಡರ್‌ಗಳ ಹೊಸ ಬೆಲೆ ನಿಗದಿಯಾಗಲಿದೆ.
ಖಾಸಗಿ ಮದ್ಯದ ಅಂಗಡಿ ಬಂದ್ : ಅಕ್ಟೋಬರ್ 1 ರಿಂದ ದೆಹಲಿಯಲ್ಲಿ ಖಾಸಗಿ ಮದ್ಯದ ಅಂಗಡಿ ಬಾಗಿಲು ಮುಚ್ಚಲಿದೆ. ಸರ್ಕಾರಿ ಅಂಗಡಿಗಳಲ್ಲಿ ಮಾತ್ರ ಮದ್ಯ ಮಾರಾಟ ನಡೆಯಲಿದೆ.