
ಕಳೆದ ಕೆಲ ದಿನಗಳಿಂದ ಮಹಿಳಾ ಸೆಲೆಬ್ರಿಟಿಗಳ ಕೊನೆಯ ಹೆಸರುಗಳು ಬದಲಾಗುತ್ತಲೇ ಅವರು ತಂತಮ್ಮ ಗಂಡಂದಿರಿಗೆ ವಿಚ್ಛೇದನ ಕೊಡುವ ಸಾಧ್ಯತೆ ಇದೆ ಎಂದೆಲ್ಲಾ ಗುಮಾನಿಗಳು ಹಬ್ಬತೊಡಗುತ್ತಿವೆ.
ಟಾಲಿವುಡ್ ನಟಿ ಸಮಂತಾ ’ಅಕ್ಕಿನೇನಿ’ ಎಂದು ಇದ್ದ ತಮ್ಮ ಕೊನೆಯ ಹೆಸರನ್ನು ಸಾಮಾಜಿಕ ಜಾಲತಾಣಗಳಲ್ಲಿರುವ ತಮ್ಮ ಪ್ರೊಫೈಲ್ ನಲ್ಲಿ ತೆಗೆದುಹಾಕಿದ್ದರಿಂದ ಹಿಡಿದು ಪ್ರಿಯಾಂಕಾ ಚೋಪ್ರಾ ಸಹ ಸಾಮಾಜಿಕ ಜಾಲತಾಣದ ಪೋರ್ಟಲ್‌ಗಳಲ್ಲಿ ತಮ್ಮ ಕೊನೆಯ ಹೆಸರು ’ಜೋನಾಸ್’ ತೆಗೆದು ಹಾಕುವವರೆಗೂ ಅವರವರ ಸಂಬಂಧಗಳ ಸ್ಟೇಟಸ್ ಏನಪ್ಪಾ ಆಯ್ತು ಎಂಬ ಬಗ್ಗೆ ಮಾಧ್ಯಮಗಳಿಗೆ ಎಲ್ಲಿಲ್ಲದ ಕುತೂಹಲ.
ಇದೀಗ ಈ ಕುತೂಹಲ ಕೆರಳಿಸುವ ಸರದಿ ದಕ್ಷಿಣ ಭಾರತದ ನಟಿ ರಶ್ಮಿಕಾ ಮಂದಣ್ಣದಾಗಿದೆ. ರಶ್ಮಿಕಾಗೆ ಇರುವ ಕೊನೆಯ ಹೆಸರೊಂದು ಇದೀಗ ಬಹಿರಂಗಗೊಂಡಿದ್ದು, ಆಕೆಯ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಇನ್‌ಸ್ಟಾಗ್ರಾಂನಲ್ಲಿ ತನ್ನ ಬೋರ್ಡಿಂಗ್ ಪಾಸ್ ಹಾಗೂ ಪಾಸ್‌ಪೋರ್ಟ್ ಹಂಚಿಕೊಂಡ ರಶ್ಮಿಕಾ, ಅದರಲ್ಲಿ ಅವರ ಕೊನೆಯ ಹೆಸರು ’Mundachadira’ ಎಂದು ಇರುವುದನ್ನು ಬಹಿರಂಗಪಡಿಸಿದ್ದಾರೆ.
ತಮ್ಮ ಕ್ರಶ್‌ಗೆ ಮದುವೆ ಗಿದುವೆ ಫಿಕ್ಸ್ ಆಗಿದ್ಯೋ ಎಂದುಕೊಂಡು ಭಾರೀ ಮನಸ್ಸಿನಿಂದ ಈ ಬಗ್ಗೆ ರೀಸರ್ಚ್ ಮಾಡಲು ಹೊರಟ ನಟಿಯ ಅಭಿಮಾನಿಗಳಿಗೆ, ಗೂಗಲ್‌ನಲ್ಲಿ ಹುಡುಕಿದಾಗ ರಶ್ಮಿಕಾ ತಂದೆಯ ಹೆಸರು ಮದನ್ ಮಂದಣ್ಣ Mundachadira ಆಗಿರುವ ಕಾರಣ ’ಅನ್ಯ’ ರೀತಿಯ ಶಂಕೆಗಳಿಗೆ ಇಲ್ಲಿ ಆಸ್ಪದ ಸಿಕ್ಕಿಲ್ಲ.
ಕೊಡಗಿನ ವಿರಾಜಪೇಟಿಯಲ್ಲಿರುವ ಕೊಡವ ಕುಟುಂಬವೊಂದರ ಕುಡಿಯಾದ ರಶ್ಮಿಕಾ, ಬ್ರಿಟಿಷರ ವಿರುದ್ಧ ಹೋರಾಡಿದ ಕೊಡಗಿನ ರಾಜಮನೆತನಗಳಲ್ಲಿ ಒಂದರಿಂದ ಬಂದಿದ್ದಾರೆ ಎನ್ನಲಾಗಿದೆ.