ತುಮಕೂರು: ತುಮಕೂರು ಜಿಲ್ಲೆಯ ತಿಪಟೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಸೇರಿಯನ್ ಹೆರಿಗೆ ಬಳಿಕ ಬಾಣಂತಿ ಮೃತಪಟ್ಟಿದ್ದಾರೆ.
ಫಿರ್ದೋಸ್(26) ಮೃತಪಟ್ಟ ಬಾಣಂತಿ. ಬೆಂಗಳೂರು ಡಿಜಿ ಹಳ್ಳಿ ಬಡಾವಣೆ ನಿವಾಸಿ ಫಿರ್ದೋಸ್ ಅವರು ಹೆರಿಗೆಗಾಗಿ ತಿಪಟೂರಿನ ತವರುಮನೆಗೆ ಆಗಮಿಸಿದ್ದರು. ಶುಕ್ರವಾರ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಧ್ಯಾಹ್ನ ಸಿಸೇರಿಯನ್ ಮೂಲಕ ಹೇರಿಗೆ ಮಾಡಿಸಲಾಗಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ತಡರಾತ್ರಿ ಮೃತಪಟ್ಟಿದ್ದಾರೆ. ಶ್ವಾಸಕೋಶದ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿ(ಪಲ್ಮನರಿ ಎಂಬಾಲಿಸಮ್) ಬಾಣಂತಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.