ಬಳ್ಳಾರಿ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು ಮುಂದುವರಿದಿದೆ. ಕೇವಲ 15 ದಿನಗಳ ಅವಧಿಯಲ್ಲಿ ಮೂವರು ಬಾಣಂತಿಯರು ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ.
ಬಳ್ಳಾರಿ ತಾಲ್ಲೂಕಿನ ಕಕ್ಕಬೇವನಳ್ಳಿ ಗ್ರಾಮದ 25 ವರ್ಷದ ಗಂಗಮ್ಮ ಫೆಬ್ರವರಿ 14 ರಂದು ಸಾವನ್ನಪ್ಪಿದ್ದಾರೆ. ಹೆರಿಗೆ ಬಳಿಕ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡಿದ್ದರಿಂದ ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚೇತರಿಸಿಕೊಂಡ ನಂತರ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಲೇ ಗಂಗಮ್ಮ ಸಾವನ್ನಪ್ಪಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಇದು 15 ದಿನಗಳಲ್ಲಿ ಸಂಭವಿಸಿದ ಮೂರನೇ ಸಾವು. ಸಿರುಗುಪ್ಪ ತಾಲ್ಲೂಕಿನ 23 ವರ್ಷದ ಬಾಣಂತಿ ಹೆರಿಗೆ ನಂತರ ಪ್ಯಾನಿಕ್ ಅಟ್ಯಾಕ್‌ನಿಂದ ಸಾವನ್ನಪ್ಪಿದ್ದಾರೆಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಅವರ ಸಾವಿಗೂ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಬಳ್ಳಾರಿಯ ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ರೆಡ್ಡಿ ಮಾತನಾಡಿ, ಫೆಬ್ರವರಿ 1 ರಿಂದ 14 ರವರೆಗೆ ಮೂವರು ಬಾಣಂತಿಯರು ಸಾವನ್ನಪ್ಪಿದ್ದಾರೆ. ಈ ಸಾವುಗಳಿಗೆ ವೈದ್ಯರೇ ಹೊಣೆಗಾರರು ಎಂದು ಹೇಳಿದ್ದಾರೆ. ಬಿಮ್ಸ್ ಆಡಳಿತ ಮಂಡಳಿ ಸಂಪೂರ್ಣವಾಗಿ ವಿಫಲವಾಗಿದೆ. ಸರಿಯಾದ ಮತ್ತು ಸಕಾಲಿಕ ಚಿಕಿತ್ಸೆ ನೀಡಿದ್ದರೆ ಜೀವ ಉಳಿಸಬಹುದಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಘಟನೆಗಳ ಹಿನ್ನೆಲೆಯಲ್ಲಿ, ಜಿಲ್ಲಾಡಳಿತವು ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹೆರಿಗೆ ಕೊಠಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ತಜ್ಞ ವೈದ್ಯರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ. ತಾಯಂದಿರ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಈ ಕ್ರಮಗಳು ಸಹಾಯ ಮಾಡುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ.