ಮಧ್ಯಪ್ರದೇಶದ ಇಂದೋರ್ನ ದೇವಸ್ಥಾನವೊಂದರಲ್ಲಿ ಮೆಟ್ಟಿಲುಬಾವಿಯ ಮೇಲ್ಛಾವಣಿ ಕುಸಿದ ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 35ಕ್ಕೆ ಏರಿದೆ.
ರಾಮನವಮಿಯಂದು ಹೆಚ್ಚಿನ ಜನಸಂದಣಿಯ ಭಾರವನ್ನು ತಡೆದುಕೊಳ್ಳಲು ಸಾಧ್ಯವಾಗದೇ ಬೆಳೇಶ್ವರ ಮಹಾದೇವ ದೇವಾಲಯದ ಮೆಟ್ಟಿಲುಬಾವಿಯ ಛಾವಣಿಯು ಕುಸಿದುಬಿದ್ದಿತ್ತು.
“ಒಟ್ಟು 35 ಜನರು ಸಾವನ್ನಪ್ಪಿದ್ದಾರೆ, ಒಬ್ಬರು ನಾಪತ್ತೆಯಾಗಿದ್ದಾರೆ ಮತ್ತು 14 ಜನರನ್ನು ರಕ್ಷಿಸಲಾಗಿದೆ. ಇಬ್ಬರು ಚಿಕಿತ್ಸೆ ಪಡೆದ ನಂತರ ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ. ಕಾಣೆಯಾದವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ” ಎಂದು ಇಂದೋರ್ ಕಲೆಕ್ಟರ್ ಇಳಯರಾಜ ಟಿ ಹೇಳಿದ್ದಾರೆ.
18 ಗಂಟೆಗಳ ಸುದೀರ್ಘ ರಕ್ಷಣಾ ಕಾರ್ಯಾಚರಣೆಯು ಗುರುವಾರ ಸುಮಾರು 12:30 ಕ್ಕೆ ಪ್ರಾರಂಭವಾಗಿ ಇನ್ನೂ ಮುಂದುವರೆದಿದೆ.
ಖಾಸಗಿ ಟ್ರಸ್ಟ್ ನಿಂದ ನಿರ್ವಹಿಸಲ್ಪಡುವ ಈ ದೇವಾಲಯವು ಇಂದೋರ್ನ ಅತ್ಯಂತ ಹಳೆಯ ವಸತಿ ಕಾಲೋನಿಗಳಲ್ಲಿ ಒಂದಾದ ಸ್ನೇಹ್ ನಗರದಲ್ಲಿದೆ. ನಿವಾಸಿಗಳು ನೀಡಿದ ದೂರಿನ ಮೇರೆಗೆ ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ ಕ್ರಮ ಕೈಗೊಂಡಿದ್ದರೆ ದುರಂತವನ್ನು ತಪ್ಪಿಸಬಹುದಿತ್ತು ಎಂದು ಮೂಲಗಳು ತಿಳಿಸಿವೆ.
ಅತಿಕ್ರಮಣಗೊಂಡ ಉದ್ಯಾನವನದಲ್ಲಿ ಮೆಟ್ಟಿಲುಬಾವಿಯ ಮೇಲೆ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿ ಸ್ಥಳೀಯರ ದೂರಿನ ಮೇರೆಗೆ 2022 ರ ಏಪ್ರಿಲ್ನಲ್ಲಿ ಬೆಳೇಶ್ವರ ಮಹಾದೇವ ದೇವಸ್ಥಾನದ ಟ್ರಸ್ಟ್ಗೆ ಪುರಸಭೆ ನೀಡಿದ ಸೂಚನೆಯ ಪ್ರತಿ ವೈರಲ್ ಆಗಿದೆ.
ಪುರಸಭೆಯು ಬಾವಿಯ ಮುಚ್ಚಳವನ್ನು ಕೆಡವಲು ಗುರುತಿಸಿದೆ ಆದರೆ ಅಂತಹ ಕ್ರಮವು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಟ್ರಸ್ಟ್ನಿಂದ ಎಚ್ಚರಿಕೆ ನೀಡಿದ ನಂತರ ಹಿಂದೆ ಸರಿದಿತ್ತು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಘಟನೆಯ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.