ಇತ್ತೀಚೆಗೆ ಭಾರತದಿಂದ ಅತ್ಯಂತ ವಿಷಕಾರಿ ಹಾವೊಂದು ಇಂಗ್ಲೆಂಡಿಗೆ ದೀರ್ಘ ಪ್ರಯಾಣವನ್ನು ಮಾಡಿದೆ. ಕೊಳಕುಮಂಡಲ ಹಾವು ಭಾರತದಿಂದ ಹಡಗಿನ ಕಂಟೇನರ್‌ನಲ್ಲಿ ವಿದೇಶಕ್ಕೆ ಪ್ರಯಾಣ ಮಾಡಿದೆ. ಇದರ ಕುರಿತು ಯಾರಿಗೂ ಅರಿವಿರಲಿಲ್ಲವೆನ್ನಲಾಗಿದೆ.
ಹಾವು ಪತ್ತೆಯಾದ ಬಳಿಕ ಇದನ್ನು ಹಿಡಿಯಲು ಬ್ರಿಟಿಷ್ ಪ್ರಾಣಿ ಆಸ್ಪತ್ರೆಯ ಸಿಬ್ಬಂದಿಯನ್ನು ಕರೆಸಲಾಗಿದೆ. ಆದರೆ, ಅದನ್ನು ನಿರ್ವಹಿಸುವಾಗ ಅವರು ಅಪಾರ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಇಂಗ್ಲೆಂಡ್ ನ ಸೌತ್ ಎಸೆಕ್ಸ್ ವನ್ಯಜೀವಿ ಆಸ್ಪತ್ರೆ, ಫೇಸ್‌ಬುಕ್ ಪೋಸ್ಟ್‌ನಲ್ಲಿ ಈ ಘಟನೆಯ ಕುರಿತು ವಿವರಿಸಿದೆ.
ಆಸ್ಪತ್ರೆ ಹೇಳುವ ಪ್ರಕಾರ, ಭಾರತದಿಂದ ಹಡಗಿನ ಕಂಟೇನರ್‌ನಲ್ಲಿ ಪತ್ತೆಯಾದ ಹಾವು ಹಿಡಿಯಲು ಅವರಿಗೆ ಕರೆ ಬಂದಿದೆ. ಬಿಬಿಸಿ ಹೇಳುವ ಪ್ರಕಾರ, ಕಲ್ಲುಗಳನ್ನು ಸಾಗಿಸುವ ಕಂಟೇನರ್‌ನಲ್ಲಿ ಹಾವು ಪತ್ತೆಯಾಗಿದೆ. ಕರೆ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯು ಉರಗ ತಜ್ಞ ಮತ್ತು ಪಶುವೈದ್ಯರನ್ನು ಒಳಗೊಂಡ ತನ್ನ ತಂಡವನ್ನು ಕಳುಹಿಸಿದೆ. ಈ ವೇಳೆ ಇಂಗ್ಲೆಂಡ್ ನ ಸ್ಥಳೀಯವಾದಂತಹ ಹಾವು ಇದಲ್ಲ ಎಂದು ತಂಡವು ತಕ್ಷಣವೇ ಗುರುತಿಸಿದೆ.
ಇದು ವಿಶ್ವದ ಅತ್ಯಂತ ವಿಷಪೂರಿತ ಹಾವುಗಳಲ್ಲಿ ಒಂದಾಗಿದೆ ಎಂದು ತಂಡಕ್ಕೆ ಅರಿವಾಗಿದೆ. ಪೋಸ್ಟ್ ನಲ್ಲಿ ಹಾವಿನ ಜಾತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಾಗಿದೆ. ಇವುಗಳು ಕೆಲವು ಮಾರಣಾಂತಿಕ ಹಾವುಗಳಲ್ಲಿ ಅಗ್ರಸ್ಥಾನದಲ್ಲಿವೆ.