ಕಾಂಗೋದ ಬಾರ್ ಆಂಡ್ ರೆಸ್ಟೋರೆಂಟ್ ನಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಐವರು ನಾಗರಿಕರು ಸಾವನ್ನಪ್ಪಿ, 14ಕ್ಕೂ ಅಧಿಕ ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆ ಅಲ್ಲಿಯ ಪೂರ್ವ ಭಾಗದ ಬೇನಿ ಎಂಬ ನಗರದಲ್ಲಿ ವರದಿಯಾಗಿದ್ದು, ಅಲೈಡ್ ಡೆಮಾಕ್ರಟಿಕ್ ಫೋರ್ಸಸ್ ಸಂಘಟನೆ ಈ ದಾಳಿ ನಡೆಸಿದೆ ಎಂದು ಅಲ್ಲಿನ ರಿಪಬ್ಲಿಕನ್ ಆಡಳಿತ ಆರೋಪಿಸಿದೆ.
ಮೇಕೆದಾಟು ಪಾದಯಾತ್ರೆ; ಸಾಧು ಕೋಕಿಲಾಗೆ ಸೆಲೆಬ್ರಿಟಿಗಳನ್ನು ಕರೆತರುವ ಜವಾಬ್ದಾರಿ ನೀಡಿದ ಕಾಂಗ್ರೆಸ್
ಅಲ್ಲಿನ ಭದ್ರತಾ ಸಿಬ್ಬಂದಿ ಬಾಂಬರ್ ನನ್ನು ತಡೆಯಲು ಪ್ರಯತ್ನಿಸಿದರೂ ಬಾರ್ ನ ಪ್ರವೇಶ ದ್ವಾರದ ಹತ್ತಿರವೇ ಸ್ಫೋಟಿಸಿದ್ದಾನೆ. ಈ ಸಮಯದಲ್ಲಿ ಬಾರ್ ಒಳಗೆ ಸಾಕಷ್ಟು ಜನರು ಇದ್ದರು ಎಂದು ಉತ್ತರ ಕಿವು ಪ್ರಾಂತ್ಯದಲ್ಲಿನ ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟದ ತೀವ್ರತೆಗೆ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬಾರ್ ನಲ್ಲಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಈ ನಗರದಲ್ಲಿ ಆಗಾಗ ಇಂತಹ ಘಟನೆಗಳು ವರದಿಯಾಗುತ್ತಿದ್ದು, ಇತ್ತೀಚೆಗಷ್ಟೇ ಚರ್ಚ್ ನಲ್ಲಿ ಕೂಡ ದಾಳಿ ನಡೆದಿತ್ತು. ಆದರೆ, ಈ ಘಟನೆ ಕುರಿತು ಇದುವರೆಗೂ ಯಾವೊಂದು ಸಂಘಟನೆ ಹೊಣೆ ಹೊತ್ತಿಲ್ಲ ಎನ್ನಲಾಗಿದೆ.