ಕೊರೊನಾ ಸಾಂಕ್ರಾಮಿಕದ ಅಪಾಯದಿಂದ ಪಾರಾಗಲು ಲಸಿಕಾ ಕೇಂದ್ರದ ಎದುರು ಜನಸಾಮಾನ್ಯರು ಸಾಲಿನಲ್ಲಿ ನಿಲ್ಲುವುದು ಸ್ವಲ್ಪ ಮಟ್ಟದಲ್ಲಿ ಕಡಿಮೆಯಾಗಿದ್ದರೂ ಕೂಡ, ಕೊರೊನಾ ತಡೆ ಲಸಿಕೆಗಳಿಗೆ ಬೇಡಿಕೆಯೇ ಇದೆ. ಇಂಥ ಸಂದರ್ಭದಲ್ಲಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಮೃತ ವ್ಯಕ್ತಿಗೆ ಎರಡು ಡೋಸ್ ಕೊರೊನಾ ಲಸಿಕೆ ಹಾಕಲಾಗಿದೆ.
ಹೌದು, ಜುಲೈನಲ್ಲೇ ಸಾವನ್ನಪ್ಪಿರುವ ಹಿಂದೂಪುರ ನಗರದ ವ್ಯಕ್ತಿಗೆ ಎರಡು ಡೋಸ್ ಲಸಿಕೆ ಪೂರ್ಣವಾಗಿ ನೀಡಲಾಗಿದೆ ಎಂದು ಅವರು ಬದುಕಿದ್ದಾಗ ಬಳಸುತ್ತಿದ್ದ ಮೊಬೈಲ್ ಸಂಖ್ಯೆಗೆ ಸೆಪ್ಟೆಂಬರ್‌ನಲ್ಲಿ ಎಸ್‌ಎಂಎಸ್ ಬಂದಿದೆ. ಇದನ್ನು ಕಂಡು ಮೃತ ವ್ಯಕ್ತಿ ಕುಟುಂಬಸ್ಥರು ಅಚ್ಚರಿ ಜತೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಕೋವಿನ್’ ವೇದಿಕೆಯಲ್ಲಿ ಸ್ಥಳೀಯ ಆರೋಗ್ಯ ಅಧಿಕಾರಿಗಳು ಲಸಿಕೆ ಪಡೆಯುವ ವ್ಯಕ್ತಿಯ ದಾಖಲೆಗಳನ್ನು ನೋಂದಣಿ ಮಾಡುವಾಗ ಎಡವಟ್ಟು ಮಾಡಿದ್ದಾರೆ. ಯಾರದ್ದೋ ಮೊಬೈಲ್ ಸಂಖ್ಯೆಗೆ ಮತ್ತಿನ್ಯಾರದ್ದೋ ಹೆಸರು ಜೋಡಣೆ ಮಾಡಿಕೊಂಡು ಲಸಿಕೆಗಳನ್ನು ನೀಡುತ್ತಿದ್ದಾರೆ.
BIG NEWS: ಕೊರೊನಾ ವಿರುದ್ಧದ ಹೋರಾಟದಲ್ಲಿ ಶೇ.90 ರಷ್ಟು ಪರಿಣಾಮಕಾರಿ ಈ ಲಸಿಕೆ
ಒಟ್ಟಿನಲ್ಲಿ ತಾವು ಕೊರೊನಾ ಲಸಿಕೆ ನೀಡುವಿಕೆಯಲ್ಲಿ ಸಾಧನೆ ಮಾಡಿದ್ದೇವೆ ಎಂದು ತೋರಿಸಿಕೊಳ್ಳುವ ಆತುರಕ್ಕೆ ಅಧಿಕಾರಿಗಳು ಬಿದ್ದಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಅನಂತಪುರ ಜಿಲ್ಲೆಯಲ್ಲಿ ಈಗಾಗಲೇ ಲಸಿಕೆ ವಿತರಣೆಯಲ್ಲಿ ಭಾರಿ ಅವ್ಯವಸ್ಥೆ ಇರುವ ಬಗ್ಗೆ ಜನರಿಂದ ಆಕ್ರೋಶ ಕೇಳಿಬಂದಿದೆ. ದಿನನಿತ್ಯದ ಲಸಿಕೆ ನೀಡುವಿಕೆ ಗುರಿಯನ್ನು ತಲುಪಲು ಅಧಿಕಾರಿಗಳು ಸಿಕ್ಕಸಿಕ್ಕವರಿಗೆ ಲಸಿಕೆ ನೀಡಿ, ಯಾರದ್ದೋ ದಾಖಲೆಗಳಿಗೆ ಜೋಡಿಸುತ್ತಿರುವುದು ಸ್ಥಳೀಯ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ.
ಸೆ.12ರವರೆಗೆ ಆಂಧ್ರಪ್ರದೇಶದಲ್ಲಿ ಸಕ್ರಿಯ ಕೊರೊನಾ ಸೋಂಕಿತರ ಸಂಖ್ಯೆ 15 ಸಾವಿರಕ್ಕೂ ಹೆಚ್ಚಿದೆ. ಕಳೆದ ಭಾನುವಾರ ಒಂದೇ ದಿನ ರಾಜ್ಯದಲ್ಲಿ15.4 ಲಕ್ಷ ಡೋಸ್ ಲಸಿಕೆ ನೀಡುವ ಮೂಲಕ ಹೊಸ ದಾಖಲೆ ಸೃಷ್ಟಿಸಲಾಗಿದೆ.