![](https://kannadadunia.com/wp-content/uploads/2025/02/bhishnappa.jpg)
ಹಾವೇರಿ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ ಹಿನ್ನೆಲೆಯಲ್ಲಿ ಊರಿಗೆ ಕರೆತರುತ್ತಿದ್ದಾಗ ಸತ್ತ ವ್ಯಕ್ತಿ ಮಾರ್ಗ ಮಧ್ಯೆಯೇ ಎದ್ದು ಕುಳಿತ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿ ನಡೆದಿದೆ.
ಬಿಷ್ಣಪ್ಪ ಅಶೋಕ್ ಗುಡಿಮನಿ ಪವಾಡ ರೀತಿಯಲ್ಲಿ ಬದುಕಿದ ವ್ಯಕ್ತಿ. ಬಂಕಾಪುರದ ಮಂಜುನಾಥನಗರ ನಿವಾಸಿಯಾಗಿರುವ ಬಿಷ್ಣಪ್ಪ ಬಿಳಿ ಕಾಮಾಲೆಯಿಂದ ಬಳಲುತ್ತಿದ್ದರು. ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಬಿಷ್ಣಪ್ಪ ಉಸಿರಾಟ ನಿಲ್ಲಿಸಿದ್ದರಿಂದ ವೈದ್ಯರು ಆತ ಮೃತಪಟ್ಟಿರುವುದಾಗಿ ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಕುಟುಂಬದವರು ಮೃತದೇಹವನ್ನು ಆಂಬುಲೆನ್ಸ್ ನಲ್ಲಿ ಧಾರವಾಡದಿಂದ ಬಂಕಾಪುರದ ಮಂಜುನಾಥ ನಗರಕ್ಕೆ ಕರೆತರುತ್ತಿದ್ದರು. ಪತಿ ಅಗಲಿಕೆ ನೋವಲ್ಲಿ ದಾರಿಯುದ್ದಕ್ಕೂ ಕಣ್ಣೀರುಡುತ್ತಿದ್ದ ಪತ್ನಿ ತನ್ನ ಪತಿಯ ಇಷ್ಟದ ಡಾಬವೊಂದರ ಬಳಿ ಡಾಬಾ ಬಂತು, ನಿನ್ನ ಅಂಗಡಿಯೂ ಬಂತು ಊಟ ಮಾಡುತ್ತೀಯಾ ಎಂದು ಗೋಳಾಡಿದ್ದಾಳೆ. ಪತ್ನಿ ಗೋಳಾಡುತ್ತಿದ್ದಂತೆ ಅಚ್ಚರಿ ರೀತಿಯಲ್ಲಿ ಮೃತ ವ್ಯಕ್ತಿ ಎದ್ದು ಕುಳಿತಿದ್ದು, ಎಲ್ಲರೂ ದಂಗಾಗಿದ್ದಾರೆ.
ತಕ್ಷಣ ಆಂಬುಲೆನ್ಸ್ ನಿಲ್ಲಿಸಿ ಶಿಗ್ಗಾಂವಿಯ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದ್ದಾರೆ. ಬಿಷ್ಣಪ್ಪ ಸಹಜವಾಗಿಯೇ ಉಸಿರಾಟ ನಡೆಸುತ್ತಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.