ಬಿಹಾರದ ಛಾಪ್ರಾದ ಸರ್ಕಾರಿ ಶಾಲೆಯೊಂದರಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ. ಎರಡು ಡಜನ್ ಗೂ ಹೆಚ್ಚು ಮಕ್ಕಳು ಮಧ್ಯಾಹ್ನದ ಊಟ ಸೇವಿಸಿದ್ದು, ಬಾಲಕಿಯ ತಟ್ಟೆಯಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ.
ಛಾಪ್ರಾ ನಗರದ ವಿಮಾನ ನಿಲ್ದಾಣದ ಬಳಿ ಇರುವ ಆಜಾದ್ ಚಂದ್ರಶೇಖರ್ ಮಿಡ್ಲ್ ಸ್ಕೂಲ್ ನಲ್ಲಿ ಎನ್.ಜಿ.ಒ.ವೊಂದು ಮಧ್ಯಾಹ್ನದ ಊಟ ಪೂರೈಸಿದೆ. ಬುಧವಾರ ಬಾಲಕಿಯೊಬ್ಬಳು ಊಟ ಬಡಿಸುತ್ತಿದ್ದಾಗ ತಟ್ಟೆಯಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ. ಅವಳಿಗಿಂತ ಮೊದಲು, ಸುಮಾರು 20-25 ಮಕ್ಕಳು ಊಟ ಮಾಡಿದ್ದರು.
ಶಾಲೆಯ ಪ್ರಾಂಶುಪಾಲ ಅನಿಲ್ ಕುಮಾರ್, ಕೂಡಲೇ ಸಿವಿಲ್ ಸರ್ಜನ್ ಹಾಗೂ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸದರ್ ಆಸ್ಪತ್ರೆಯ ವೈದ್ಯರ ತಂಡ ಶಾಲೆಗೆ ಆಗಮಿಸಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದೆ.
ಮಕ್ಕಳನ್ನು ಪರೀಕ್ಷಿಸಿದ ವೈದ್ಯರಿಗೆ ಅವರ ದೇಹದಲ್ಲಿ ವಿಷದ ಲಕ್ಷಣಗಳು ಕಂಡು ಬಂದಿಲ್ಲ. ಆಹಾರವನ್ನು ಸೇವಿಸಿದ ನಂತರ ಮಾತ್ರ ಮಕ್ಕಳಿಗೆ ಸ್ವಲ್ಪ ವಾಕರಿಕೆ ಕಾಣಿಸಿಕೊಂಡಿದೆ. ಆಹಾರ ಸುರಕ್ಷತಾ ಅಧಿಕಾರಿಗಳು ಊಟದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಿದ್ದಾರೆ.