ಶಿವಮೊಗ್ಗ ಜಿಲ್ಲೆ ಜೋಗ -ಕಾರ್ಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಿನ್ನಿ ಗ್ರಾಮದಲ್ಲಿ ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ರವಿಕುಮಾರ್ ಜೈನ್(48) ಮಂಗಳವಾರ ಮಧ್ಯಾಹ್ನ ಮನೆಯಲ್ಲಿ ಮಲಗಿದ್ದ ವೇಳೆ ತಲೆಗೆ ತೀವ್ರವಾದ ಹೊಡೆತ ಬಿದ್ದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ. ಮಂಗಳವಾರ ಸಂಘದ ಕೆಲಸ ಮುಗಿಸಿ ಬಂದು ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿ ವಿಶ್ರಾಂತಿ ಪಡೆಯುತ್ತಿದ್ದ ರವಿಕುಮಾರ್ ಅವರ ತಲೆಗೆ ಭಾರಿ ಹೊಡೆತ ಬಿದ್ದದು, ರಕ್ತಸ್ರಾವವಾಗಿದೆ.
ಅವರ ತಾಯಿ ಸಂಜೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ರಕ್ತದ ಮಡುವಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ರವಿಕುಮಾರ್ ಅವರನ್ನು ನೆರೆಮನೆಯವರ ಸಹಾಯದಿಂದ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ರವಿಕುಮಾರ್ ಮೃತಪಟ್ಟಿದ್ದಾರೆ. ಅವಿವಾಹಿತರಾಗಿದ್ದ ರವಿಕುಮಾರ್ ಮಿತ ಭಾಷಿಯಾಗಿದ್ದರು. ಅವರ ಸಾವಿನಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.