ಬೆಂಗಳೂರು: ಬೆಂಗಳೂರಿನಲ್ಲಿ ಹೆರಿಗೆ ನಂತರ ಆಸ್ಪತ್ರೆಗೆ ದಾಖಲಾಗಿದ್ದ ಬಾಣಂತಿ ಸಾವನ್ನಪ್ಪಿದ್ದಾರೆ. ಮಣಿಪಾಲ ಆಸ್ಪತ್ರೆಯಲ್ಲಿ 33 ವರ್ಷದ ಬಾಣಂತಿ ಜನನಿ ಮೃತಪಟ್ಟಿದ್ದಾರೆ.
ಐವಿಎಫ್ ಮೂಲಕ ಅವಳಿ ಮಕ್ಕಳನ್ನು ಜನನಿ ಮತ್ತು ಕೇಶವ ದಂಪತಿ ಪಡೆದಿದ್ದರು. ಕ್ಲೌಡ್ ಲೈನ್ ಆಸ್ಪತ್ರೆಯಲ್ಲಿ ಹೆರಿಗೆ ಪ್ಯಾಕೇಜ್ ಮಾಡಿಸಿದ್ದು, ಮೇ 2 ರಂದು ಪ್ರಸವಪೂರ್ವ ಹೆರಿಗೆಯಾಗಿತ್ತು. ಹೆರಿಗೆಯ ಬಳಿಕ ಜನನಿಗೆ ಜಾಂಡಿಸ್ ಮತ್ತು ಲಿವರ್ ಸಮಸ್ಯೆ ಇದೆ ಎಂದು ವೈದ್ಯರು ಹೇಳಿದ್ದರು. ಬಳಿಕ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.
ಇಂದು ಬೆಳಿಗ್ಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಬಾಣಂತಿ ಜನನಿ ಸಾವನ್ನಪ್ಪಿದ್ದಾರೆ. ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ 30 ಲಕ್ಷ ರೂಪಾಯಿ ಬಿಲ್ ಮಾಡಿದ ಆರೋಪ ಕೇಳಿ ಬಂದಿದೆ. ಬಿಲ್ ಪಾವತಿಸಿ ಶವ ತೆಗೆದುಕೊಂಡು ಹೋಗಿ ಎಂದು ವೈದ್ಯರು ಹೇಳಿದ್ದಾರೆ. ಕ್ಲೌಡ್ ಲೈನ್ ಆಸ್ಪತ್ರೆ ನಿರ್ಲಕ್ಷ್ಯದಿಂದ ಜನನಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ ಜನನಿ ಕುಟುಂಬದವರು ಮಣಿಪಾಲ್ ಆಸ್ಪತ್ರೆಯ ಬಿಲ್ ಅನ್ನು ಕ್ಲೌಡ್ ಲೈನ್ ಆಸ್ಪತ್ರೆಯವರೇ ಪಾವತಿಸಲಿ ಎಂದು ಒತ್ತಾಯಿಸಿದ್ದಾರೆ.
ಕ್ಲೌಡ್ ಲೈನ್ ಆಸ್ಪತ್ರೆಯ ಬಳಿ ಜನನಿ ಕುಟುಂಬದವರು ಜಮಾಯಿಸಿದ್ದಾರೆ. ಕ್ಲೌಡ್ ಲೈನ್ ಆಸ್ಪತ್ರೆಯಲ್ಲೂ 25 ಲಕ್ಷ ರೂಪಾಯಿ ಬಿಲ್ ಮಾಡಿದ್ದಾರೆ ಎಂದು ಕೇಶವ ಆರೋಪ ಮಾಡಿದ್ದಾರೆ. ಮಾಹಿತಿ ತಿಳಿದ ಜೆಬಿ ನಗರ ಠಾಣೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.