ಬೆಳಗಾವಿ: ಮೊಸಳೆ ದಾಳಿಯಿಂದ ರೈತ ಸಾವನ್ನಪ್ಪಿದ ಘಟನೆ ಚಿಕ್ಕೋಡಿ ತಾಲೂಕಿನ ದತ್ತವಾದ ಸದಲಗಾ ಸಮೀಪದ ದೂದ್ ಗಂಗಾ ನದಿ ದಡದಲ್ಲಿ ನಡೆದಿದೆ.
ಮೃತರನ್ನು ಚಿಕ್ಕೋಡಿ ತಾಲೂಕಿನ ಸದಲಗಾ ಗ್ರಾಮದ ಮಹಾದೇವ ಪುನ್ನಪ್ಪ ಖುರೆ(72) ಎಂದು ಗುರುತಿಸಲಾಗಿದೆ. ಮೇ 10ರಂದು ನದಿ ತೀರದ ಪ್ರದೇಶದ ತಮ್ಮ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ಅವರು ಕೆಲಸ ನಂತರ ಸ್ನಾನ ಮಾಡಲು ನದಿಗೆ ಇಳಿದಿದ್ದಾರೆ. ನದಿಯಲ್ಲಿ ಈಜಾಡಿ ದಡಕ್ಕೆ ಬರುವಾಗ ಮೊಸಳೆ ಕಾಲು ಹಿಡಿದು ನೀರೊಳಗೆ ಎಳೆದುಕೊಂಡು ಹೋಗಿದೆ.
ಮಹಾದೇವ ಅವರ ಎಡ ತೊಡೆಯ ಮೇಲೆ ಗಾಯದ ಗುರುತು ಕಂಡುಬಂದಿದೆ. ಶನಿವಾರ ರಮೇಶ್ ಎಂಬುದರ ಜಮೀನಿನ ಸಮೀಪ ನದಿ ದಂಡೆಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.