ಚಂಡೀಗಢದ ನೆಕ್ಸಸ್ ಎಲಾಂಟೆ ಮಾಲ್ನ ಫುಡ್ ಕೋರ್ಟ್ನಲ್ಲಿ ಶುಕ್ರವಾರ ಊಟದಲ್ಲಿ ಸತ್ತ ಜಿರಳೆ ಪತ್ತೆಯಾಗಿದೆ. ಅದೇ ಮಾಲ್ನಲ್ಲಿರುವ ಪ್ರಸಿದ್ಧ ಉಪಾಹಾರ ಗೃಹದಲ್ಲಿ ಆರ್ಡರ್ ಮಾಡಿದ ಚೋಲೆ ಬಾತುರ್ ಪ್ಲೇಟ್ನಲ್ಲಿ ಹಲ್ಲಿ ಕಂಡುಬಂದ ಒಂದು ತಿಂಗಳ ನಂತರ ಈ ಘಟನೆ ವರದಿಯಾಗಿದೆ.
ಮೌಲಿ ಕಾಂಪ್ಲೆಕ್ಸ್ನ ನಿವಾಸಿ ಅನಿಲ್ ಕುಮಾರ್, ʼಮಾಲ್ನ ಫುಡ್ ಕೋರ್ಟ್ನಲ್ಲಿರುವ ಚೈನೀಸ್ ಫುಡ್ ಔಟ್ಲೆಟ್ “ನಿ ಹಾಮೊ” ನಿಂದ ಫ್ರೈಡ್ ರೈಸ್ ಆರ್ಡರ್ ಮಾಡಿದ್ದೆವು, ಅದರಲ್ಲಿ ಜಿರಳೆ ಕಂಡು ಆಘಾತವಾಯಿತುʼ ಎಂದು ಹೇಳಿದ್ದಾರೆ.
ಅವರು ಅದನ್ನು ರೆಸ್ಟೋರೆಂಟ್ ಸಿಬ್ಬಂದಿಗೆ ತೋರಿಸಿದಾಗ ಅವರು ಅದನ್ನು ಈರುಳ್ಳಿ ತುಂಡು ಎಂದು ತಳ್ಳಿಹಾಕಿದರು. ಹೀಗಾಗಿ ಗ್ರಾಹಕರು ಪೊಲೀಸರಿಗೆ ಕರೆ ಮಾಡಬೇಕಾಯಿತು.
ರೆಸ್ಟೊರೆಂಟ್ ಮತ್ತು ಮಾಲ್ ಆಡಳಿತದ ವಿರುದ್ಧ ಕ್ರಮ ಕೈಗೊಳ್ಳುವಂತೆ ಅನಿಲ್ ಕುಮಾರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಆಗ್ರಹಿಸಿದ್ದಾರೆ. ಆದರೆ ಆಹಾರ ಮಾದರಿಗಳ ಪರಿಶೋಧನೆ ಫಲಿತಾಂಶ ಬಂದ ನಂತರವೇ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ಸಿಕ್ಕಿದೆ. ಎಲಾಂಟೆ ಫುಡ್ ಕೋರ್ಟ್ ಅಯಾನ್ ಫುಡ್ಸ್ ಒಡೆತನದಲ್ಲಿದೆ ಮತ್ತು ರೆಸ್ಟೋರೆಂಟ್ ನೇರವಾಗಿ ಅವರಿಂದಲೇ ನಡೆಸಲ್ಪಡುತ್ತದೆ.
ವರದಿಯ ಪ್ರಕಾರ, ಮಾಲ್ ವಕ್ತಾರರು ಹೇಳಿಕೆಯಲ್ಲಿ, ಕಡಿಮೆ ಅವಧಿಯಲ್ಲಿ ಇದು ಎರಡನೇ ಘಟನೆಯಾಗಿದೆ ಮತ್ತು ಇದು ನಮಗೆ ಸ್ವೀಕಾರಾರ್ಹವಲ್ಲ. ನೈರ್ಮಲ್ಯ ಮತ್ತು ಸುರಕ್ಷತೆಯು ಅತ್ಯಂತ ಮಹತ್ವದ್ದಾಗಿದೆ. ಫುಡ್ ಕೋರ್ಟ್ನಲ್ಲಿ ಸಂರ್ಪೂಣ ಆಹಾರ ಸುರಕ್ಷತಾ ಪರಿಶೋಧನೆ ನಡೆಸಲು ಮತ್ತು ಅಗತ್ಯ ದಂಡನಾತ್ಮಕ ಕ್ರಮ ತೆಗೆದುಕೊಳ್ಳುವಂತೆ ನಾವು ತಿಳಿಸುತ್ತೇವೆ ಎಂದಿದ್ದಾರೆ.