ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಕಣ್ಮರೆಯಾಗಿದ್ದ ಕೇರಳದ ಲಾರಿ ಚಾಲಕ ಅರ್ಜುನ್ ಮೃತದೇಹ ಹಾಗೂ ಮಣ್ಣಿನಡಿ ಹೂತುಹೋಗಿದ್ದ ಲಾರಿಯನ್ನು ಪತ್ತೆ ಹಚ್ಚುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಕಾರ್ಯಾಚರಣೆಯ ಆರಂಭದಲ್ಲಿ ಅರ್ಜುನ್ ಸೇರಿದಂತೆ ನದಿಪಾಲಾಗಿದ್ದ ಪ್ರತಿಯೊಬ್ಬರನ್ನೂ ರಕ್ಷಿಸುವುದು ನಮ್ಮ ಆದ್ಯತೆಯಾಗಿತ್ತು. ಆದರೆ ವೇಗವಾಗಿ ಹರಿಯುತ್ತಿದ್ದ ನೀರು, ನಿರಂತರ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆ ಅಸಾಧ್ಯವಾಗಿ ಪರಿಣಮಿಸಿತ್ತು. ದುರಾದೃಷ್ಟವಶಾತ್ ರಕ್ಷಣಾಕಾರ್ಯ ಕೈಗೂಡಲಿಲ್ಲ, ದುರ್ಘಟನೆಯಲ್ಲಿ ಎಲ್ಲರೂ ಸಾವಿಗೀಡಾದರು. ಈ ಬಗ್ಗೆ ನನಗೂ ಬೇಸರವಿದೆ ಎಂದು ತಿಳಿಸಿದ್ದಾರೆ.
ಒಂದಷ್ಟು ಮೃತದೇಹಗಳನ್ನು ಈ ಹಿಂದೆಯೇ ಹೊರತೆಗೆದಿದ್ದೆವು, ಅಂತಿಮವಾಗಿ ಮಣ್ಣಿನಡಿ ಸಿಲುಕಿದ್ದ ಲಾರಿಯ ಸಹಿತ ಚಾಲಕನ ಮೃತದೇಹ ಹೊರತೆಗೆಯಲಾಗಿದೆ. ಸ್ಥಗಿತಗೊಂಡಿದ್ದ ಶೋಧ ಕಾರ್ಯಾಚರಣೆಯನ್ನು ಮರು ಆರಂಭಿಸುವಂತೆ ಆತ್ಮೀಯರು, ಸಂಸದರು ಆದ ಎಐಸಿಸಿ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ನಮ್ಮ ಸರ್ಕಾರವನ್ನು ಕೋರಿದ್ದರು.
ಮಾನವೀಯ ನೆಲೆಯಲ್ಲಿ ಕೇರಳದ ಲಾರಿ ಚಾಲಕ ಅರ್ಜುನ್‌ನ ಮೃತದೇಹವನ್ನು ಅವರ ಊರಿಗೆ ತಲುಪಿಸುವ ಕಾರ್ಯವನ್ನು ನಮ್ಮ ಸರ್ಕಾರ ಮಾಡಲಿದೆ. ಮೃತನ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಸಿಎಂ ತಿಳಿಸಿದ್ದಾರೆ.