ಆಗ್ರಾ: ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಹೇಶ್ ಬಾಘೇಲ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದರು. ಇನ್ನೇನು ಅಂತ್ಯಕ್ರಿಯೆ ಮಾಡಬೇಕೆಂದು ಅಂತಿಮ ವಿಧಿ-ವಿಧಾನ ನೆರವೇರಿಸುತ್ತಿದ್ದ ವೇಳೆ ಬಾಘೇಲ್ ಕಣ್ಣು ತೆರೆದಿದ್ದಾರೆ. ಇದನ್ನು ಕಂಡು ಕುಟುಂಬಸ್ಥರಿಗೆ ಆಘಾತದ ಜೊತೆ ಆನಂದವೂ ಆಗಿದೆ.
ಉತ್ತರ ಪ್ರದೇಶದ ಆಗ್ರಾದಲ್ಲಿ ಬಿಜೆಪಿ ಮುಖಂಡ ಮಹೇಶ್ ಬಾಘೇಲ್ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲ ಸಮಯದ ಬಳಿಕ ವೈದ್ಯರು ಬಾಘೇಲ್ ಮೃತಪಟ್ಟಿದ್ದಾರೆ ಎಂದು ಕುಟುಂಬದವರಿಗೆ ತಿಳಿಸಿದ್ದರು. ಮನೆಯವರೆಲ್ಲರೂ ದು:ಖದ ಮಡುವಿನಲ್ಲಿ ಬಾಘೇಲ್ ಶವನ್ನು ಮನೆಗೆ ಕರೆತಂದಿದ್ದು, ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು.
ಈ ವೇಳೆ ಬಾಘೇಲ್ ದೇಹದಲ್ಲಿ ಚಲನವಲನ ಕಂಡು ಬಂದಿದ್ದು, ಅವರು ಕಣ್ಣು ತೆರೆದಿದ್ದಾರೆ. ಸತ್ತೇ ಹೋಗಿದ್ದಾರೆ ಎಂದು ಭಾವಿಸಿದ್ದ ವ್ಯಕ್ತಿಯಲ್ಲಿ ಮತ್ತೆ ಜೀವ ಬಂದಿದೆ. ಇದನ್ನು ಕಂಡು ಬಾಘೇಲ್ ಅವರನ್ನು ಕುಟುಂಬದವರು ಮತ್ತೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಾಘೇಲ್ ಸದ್ಯ ಆರೋಗ್ಯದಿಂದ ಇರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಬಾಘೇಲ್ ಅವರ ಬಿಪಿ ಕೂಡ ಸಹಜ ಸ್ಥಿತಿಗೆ ಬಂದಿದ್ದು, ಅವರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಹೋದರ ಲಖನ್ ಸಿಂಗ್ ಬಾಘೇಲ್ ತಿಳಿಸಿದ್ದಾರೆ. ಮಹೇಶ್ ಬಾಘೇಲ್ ಅವರ ನಿಧನ ಸುದ್ದಿ ಕೇಳಿ ಸೋಷಿಯಲ್ ಮೀಡಿಯಾದಲ್ಲಿಯೂ ಸಂಬಂಧಿಕರು ಶ್ರದ್ಧಾಂಜಲಿ ಸಲ್ಲಿಸಿದ್ದರು. ಸಧ್ಯ ಅವರು ಮತ್ತೆ ಬದುಕಿ ಬಂದಿರುವ ವಿಷಯ ತಿಳಿದು ಎಲ್ಲರೂ ಸಂತೋಷ ಪಟ್ಟಿದ್ದಾರೆ.