ನವದೆಹಲಿ: ದೆಹಲಿ ಮಹಿಳಾ ಆಯೋಗದ(ಡಿಸಿಡಬ್ಲ್ಯು) ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರಿಗೇ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಜನವರಿ 19 ರ ಗುರುವಾರ ಮುಂಜಾನೆ ಏಮ್ಸ್ ಹೊರಗಿನ ರಸ್ತೆಯಲ್ಲಿ ಕಾರ್ ನಲ್ಲಿದ್ದ ಆರೋಪಿ ಕಿರುಕುಳ ನೀಡಿ ನಂತರ 10-15 ಮೀಟರ್ ಎಳೆದೊಯ್ದಿದ್ದಾನೆ. ಸ್ವಾತಿ ಮಲಿವಾಲ್ ತಮ್ಮ ತಂಡದೊಂದಿಗೆ ದೂರದಲ್ಲಿ ನಿಲ್ದಾಣದಲ್ಲಿದ್ದ ದೆಹಲಿಯ ಮಹಿಳಾ ಭದ್ರತೆಯ ಸ್ಥಿತಿಯನ್ನು ಪರಿಶೀಲಿಸುತ್ತಿದ್ದ ವೇಳೆಯೇ ಘಟನೆ ನಡೆದಿದೆ.
ಮಲಿವಾಲ್ ಪ್ರಕಾರ, ಅವರು AIIMS ನ ಎದುರಿನ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ, ಅವಳ ಮುಂದೆ ಬಿಳಿ ಬಲೆನೋ ಕಾರ್ ನಿಲ್ಲಿಸಿದ ವ್ಯಕ್ತಿ ಎಲ್ಲಿಗಾದರೂ ಡ್ರಾಪ್ ಮಾಡಬಹುದೇ ಎಂದು ಕೇಳಿದ. ಅದಕ್ಕೆ ತನ್ನ ಸಂಬಂಧಿಕರು ತನ್ನನ್ನು ಕರೆದುಕೊಂಡು ಹೋಗಲು ಬರುತ್ತಿದ್ದಾರೆ ಎಂದು ಉತ್ತರಿಸಿದ್ದಾರೆ. ಆದರೂ ಪಾನಮತ್ತ ಚಾಲಕ ಆಕೆಗೆ ಲಿಫ್ಟ್ ಕೊಡುವುದಾಗಿ ಬಲವಂತ ಮಾಡಿದ್ದಾನೆ.
ಅಶ್ಲೀಲ ಸನ್ನೆ, ಕೆಟ್ಟ ಭಾಷೆ ಬಳಸಿದ್ದಾನೆ. ಈ ವೇಳೆ ಸ್ವಾತಿ ಆತನ ಕಾರ್ ಕೀ ತೆಗೆದುಕೊಳ್ಳಲು ಕಾರ್ ಒಳಗೆ ಕೈಹಾಕಿದಾಗ ಆರೋಪಿ ಕಿಟಕಿ ಮುಚ್ಚಲು ಯತ್ನಿಸಿ ಕಾರ್ ಚಾಲನೆ ಮಾಡಿದ್ದಾನೆ. ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿದ್ದಾನೆ.
ಡಿಸಿಡಬ್ಲ್ಯೂ ಮುಖ್ಯಸ್ಥರ ದೂರಿನ ಆಧಾರದ ಮೇಲೆ ಕೋಟ್ಲಾ ಮುಬಾರಕ್ ಪುರ್‌ನಲ್ಲಿ ಪಾನಮತ್ತ ಚಾಲಕನನ್ನು ದಕ್ಷಿಣ ದೆಹಲಿಯ ಸಂಗಮ್ ವಿಹಾರ್ ನಿವಾಸಿ 47 ವರ್ಷದ ಹರೀಶ್ ಚಂದ್ರ ಎಂದು ಗುರುತಿಸಲಾಗಿದ್ದು, ಬಂಧಿಸಲಾಗಿದೆ.
ಕಳೆದ ರಾತ್ರಿ, ನಾನು ದೆಹಲಿಯಲ್ಲಿ ಮಹಿಳಾ ಸುರಕ್ಷತೆಯ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದೆ. ಕಾರು ಚಾಲಕ, ಕುಡಿದ ಮತ್ತಿನಲ್ಲಿ ನನಗೆ ಕಿರುಕುಳ ನೀಡಿದ್ದಾನೆ. ನಾನು ಅವನನ್ನು ಹಿಡಿದಾಗ ಅವನು ಕಾರಿನ ಕಿಟಕಿಯಲ್ಲಿ ನನ್ನ ಕೈಯನ್ನು ಹಿಡಿದು ಎಳೆದಾಡಿದನು. ದೇವರೇ ನನ್ನ ಜೀವ ಉಳಿಸಿದ. ಮಹಿಳಾ ಆಯೋಗದ ಅಧ್ಯಕ್ಷರಿಗೆ ದೆಹಲಿಯಲ್ಲಿ ಸುರಕ್ಷತೆ ಇಲ್ಲವೆಂದರೆ ಪರಿಸ್ಥಿತಿ ಊಹಿಸಬಹುದು ಎಂದು ಮಲಿವಾಲ್ ಹಿಂದಿಯಲ್ಲಿ ಟ್ವಿಟರ್‌ನಲ್ಲಿ ಬರೆದಿದ್ದಾರೆ.