ಬೆಂಗಳೂರು: ವಂಚನೆ ದೂರು ನೀಡಲು ಠಾಣೆಗೆ ಬಂದ ಮಹಿಳೆಯನ್ನು ಇನ್ ಸ್ಪೆಕ್ಟರ್ ಮಂಚಕ್ಕೆ ಕರೆದ ಘಟನೆ ನಡೆದಿದ್ದು, ಕೊಡಿಗೇಹಳ್ಳಿ ಠಾಣೆ ಇನ್ ಸ್ಪೆಕ್ಟರ್ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ.
ಪರಿಚಿತ ಉದ್ಯಮಿ ವೀರೇಂದ್ರಬಾಬು ಎಂಬುವರು 15 ಲಕ್ಷ ರೂಪಾಯಿ ಪಡೆದು ವಂಚಿಸಿರುವುದಾಗಿ ಸಂತ್ರಸ್ತೆ ಕೊಡಿಗೇಹಳ್ಳಿ ಠಾಣೆಗೆ ದೂರು ನೀಡಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಇನ್ ಸ್ಪೆಕ್ಟರ್ ಎನ್. ರಾಜಣ್ಣ ಅನುಚಿತ ವರ್ತನೆ ತೋರಿದ್ದಾರೆ.
ಸಂತ್ರಸ್ತೆಯನ್ನು ವಿಚಾರಣೆ ನೆಪದಲ್ಲಿ ಠಾಣೆಗೆ ಆಹ್ವಾನಿಸುತ್ತಿದ್ದರು. ಅಲ್ಲದೇ ಡ್ರೈ ಫ್ರೂಟ್ಸ್ ಬಾಕ್ಸ್ ಮತ್ತು ಲಾಡ್ಜ್ ಕೊಠಡಿಯ ಕೀ ಕೊಟ್ಟು ಖಾಸಗಿಯಾಗಿ ಭೇಟಿಯಾಗಲು ಆಹ್ವಾನಿಸಿದ್ದರು. ಇದಕ್ಕೆ ಆಕ್ಷೇಪಿಸಿದ್ದ ಸಂತ್ರಸ್ತೆ ಡಿಸಿಪಿ ಲಕ್ಷ್ಮಿಪ್ರಸಾದ್ ಅವರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ಇಲಾಖಾ ಮಟ್ಟದ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಯಲಹಂಕ ಉಪ ವಿಭಾಗದ ಎಸಿಪಿ ಆರ್. ಮಂಜುನಾಥ್ ಅವರಿಗೆ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿ ಪ್ರಸಾದ್ ಸೂಚಿಸಿದ್ದಾರೆ.