ಬೆಂಗಳೂರು: ರಾಜಧಾನಿ ಬೆಂಗಳೂರಿನ ನ್ಯೂತರಗುಪೇಟೆಯಲ್ಲಿ ಸಂಭವಿಸಿದ ಭಯಂಕರ ಸ್ಫೋಟಕ್ಕೆ ಮೂವರ ದುರ್ಮರಣ ಪ್ರಕರಣ ಹಲವು ಅನುಮಾನಕ್ಕೆ ಕಾರಣವಾಗಿದೆ.
ಚಾಮರಾಜಪೇಟೆಯ ರಾಯನ್ ಸರ್ಕಲ್ ಬಳಿಯ ನ್ಯೂ ತರಗುಪೇಟೆಯ ಗೋದಾಮಿನಲ್ಲಿ ಸಂಭವಿಸಿದ ನಿಗೂಢ ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ. ಗೋದಾಮಿನ ಹೊರಭಾಗದಲ್ಲಿ ನಿಲ್ಲಿಸಿದ್ದ 10ಕ್ಕು ಹೆಚ್ಚು ಬೈಕ್ ಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
LIC ಪಾಲಿಸಿ ಹೊಂದಿರುವವರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ
ಸ್ಫೋಟದ ಬಗ್ಗೆ ಮಾತನಾಡಿರುವ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ, ಇದೊಂದು ಟ್ರಾನ್ಸ್ ಪೋರ್ಟ್ ಗೋದಾಮಿನಂತೆ ಕಂಡು ಬರುತ್ತಿದ್ದು, ಗೋದಾಮಿನಲ್ಲಿ ಯಾವುದೇ ಸಿಲಿಂಡರ್, ಪಟಾಕಿ ಅಥವಾ ಪಂಚರ್ ಅಂಗಡಿಯ ಕಂಪ್ರೆಸರ್ ಆಗಲಿ ಸ್ಫೋಟಗೊಂಡಿಲ್ಲ. ಪಟಾಕಿ ಬಾಕ್ಸ್ ಗಳ ನಡುವೆ ಇದ್ದ ಒಂದು ಬಾಕ್ಸ್ ನಲ್ಲಿದ್ದ ಸ್ಫೋಟಕ ಬ್ಲಾಸ್ಟ್ ಆಗಿ ಈ ಘಟನೆ ಸಂಭವಿಸಿದಂತಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಯಬೇಕಿದೆ ಎಂದು ಹೇಳಿದ್ದಾರೆ.
ಗೋದಾಮಿನಲ್ಲಿ 15 ಪಟಾಕಿ ಬಾಕ್ಸ್ ಗಳನ್ನು ಸಂಗ್ರಹಿಸಿ ಇಡಲಾಗಿದೆ. ಆದರೆ ಯಾವುದೇ ಪಟಾಕಿ ಬಾಕ್ಸ್ ಸ್ಫೋಟಗೊಂಡಿಲ್ಲ. ಆದರೆ ಒಂದು ಬಾಕ್ಸ್ ಮಾತ್ರ ಸ್ಫೋಟಗೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಮೇಲ್ನೋಟಕ್ಕೆ ಸ್ಫೋಟಕದ ಮಾದರಿ ಕಂಡು ಬರುತ್ತಿದೆ. ಘಟನಾ ಸ್ಥಳಕ್ಕೆ ಎಫ್ ಎಸ್ ಎಲ್ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.