ಬೆಂಗಳೂರು: ರಾಜ್ಯದಲ್ಲಿ ಮೂವರು ಉಪ ಮುಖ್ಯಮಂತ್ರಿಗಳ ಸ್ಥಾನ ಸೃಷ್ಟಿ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ. ಸಚಿವ ಸತೀಶ ಜಾರಕಿಹೊಳಿ ಅವರು, ಉಪ ಮುಖ್ಯಮಂತ್ರಿ ಹುದ್ದೆ ಕುರಿತಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಮತ್ತಿಬ್ಬರು ಪ್ರಭಾವಿ ಸಚಿವರಾದ ಜಮೀರ್ ಅಹ್ಮದ್ ಮತ್ತು ಕೆ.ಎನ್. ರಾಜಣ್ಣ ಕೂಡ ಉಪಮುಖ್ಯಮಂತ್ರಿ ವಿಚಾರವಾಗಿ ಪ್ರಸ್ತಾಪ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಸಹಕಾರ ಸಚಿವ ಕೆ.ಎನ್. ರಾಜಣ್ಣ, ಮೂವರು ಡಿಸಿಎಂ ಮಾಡಿದರೆ ತೊಂದರೆ ಏನು? ರಾಜ್ಯದಲ್ಲಿ ಮೂರು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸುವಂತೆ ಮೊದಲಿನಿಂದ ಹೇಳುತ್ತಿದ್ದೇನೆ. ಚುನಾವಣೆ ಕಾರಣಕ್ಕೆ ಇದನ್ನು ಪ್ರಸ್ತಾಪಿಸದಂತೆ ಎಐಸಿಸಿ ವರಿಷ್ಠರು ತಿಳಿಸಿದ್ದರು. ಅದಕ್ಕಾಗಿ ಸುಮ್ಮನಿದ್ದೆವು ಎಂದು ಹೇಳಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ನನ್ನ ಸಹಮತ ಇದೆ. ಮೂರು ಡಿಸಿಎಂ ಹುದ್ದೆ ಸೃಷ್ಟಿಯಿಂದ ಯಾರಿಗೂ ತೊಂದರೆ ಆಗುವುದಿಲ್ಲ ಎಂದು ರಾಜಣ್ಣ ಹೇಳಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಉಪಮುಖ್ಯಮಂತ್ರಿ ಸ್ಥಾನ ಕೇಳುವುದರಲ್ಲಿ ತಪ್ಪೇನಿಲ್ಲ. ಎಲ್ಲಾ ಸಮಾಜಕ್ಕೂ ತಮ್ಮ ಸಮಾಜದವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎನ್ನುವ ಹಂಬಲ ಇರುತ್ತದೆ. ಮುಸ್ಲಿಂ ಸೇರಿದಂತೆ ಲಿಂಗಾಯಿತ, ದಲಿತ ಸಮಾಜಗಳಿಂದಲೂ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇದ್ದು, ನಾವು ಕೂಡ ಉಪಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದೇವೆ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಆದರೆ ಉಪಮುಖ್ಯಮಂತ್ರಿ ಸ್ಥಾನ ಕೇಳಿದ್ದರೂ ನಿರ್ಧಾರ ವರಿಷ್ಠರಿಗೆ ಬಿಟ್ಟ ವಿಚಾರವಾಗಿದೆ. ಹೈಕಮಾಂಡ್ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.