ಬೆಂಗಳೂರು: ಹೆಚ್ಚುವರಿ ಡಿಸಿಎಂ ಹುದ್ದೆ ವಿಚಾರವಾಗಿ ಯಾರೂ ಬಹಿರಂಗ ಹೇಳಿಕೆ ನೀಡದಂತೆ ಸಿಎಂ ಸಿದ್ದರಾಮಯ್ಯ ಸಚಿವರು ಹಾಗೂ ಶಾಸಕರಿಗೆ ತಾಕೀತು ಮಾಡಿದ್ದಾರೆ.
ಹೆಚ್ಚುವರಿ ಡಿಸಿಎಂ ಹುದ್ದೆ ವಿಚಾರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ಸಚಿವರು, ಶಾಸಕರು ದಿನಕ್ಕೊಂದು ರೀತಿಯಲ್ಲಿ ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದಾಗಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದಂತಾಗಿದ್ದು, ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ನಾಯಕರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಡಿಸಿಎಂ ಹುದ್ದೆ ವಿಚಾರ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಬಹಿರಂಗ ಹೇಳಿಕೆ ನೀಡಿದ್ದ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಹುದ್ದೆ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಯಾವುದೇ ವಿಚಾರವಾಗಿ ಬಹಿರಂಗವಾಗಿ ಹೇಳಿಕೆ ಕೊಡಬೇಡಿ ಎಂದು ತಾಕೀತು ಮಾಡಿದ್ದಾರೆ. ಬಹಿರಂಗ ಹೇಳಿಕೆ ನೀಡುವುದರಿಂದ ಸರ್ಕಾರದ ಮೇಲೆ ಹಾಗೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.