ಬೆಂಗಳೂರು: ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾರಿಗೆ ಸಂಚಾರ ಸ್ತಬ್ಧಗೊಂಡಿದೆ. ಈ ನಡುವೆ ಸಾರಿಗೆ ನೌಕರರು ಸರ್ಕಾರಕ್ಕೆ ಮಧ್ಯಾಹ್ನ 12 ಗಂಟೆಯ ಗಡುವು ನೀಡಿದ್ದು, ಅಷ್ಟರಲ್ಲಿ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಡಿಪೋ ಬಿಟ್ಟು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ, ಸಾರಿಗೆ ನೌಕರರಿಗೆ ಇಲ್ಲಿಯವರೆಗೆ ಪೂರ್ಣ ವೇತನ ನೀಡಿದ್ದೇವೆ. ಏಕಕಾಲಕ್ಕೆ ಎಲ್ಲದಕ್ಕೂ ಬದಲಿ ವ್ಯವಸ್ಥೆ ಮಾಡಲು ಆಗಲ್ಲ. ಪ್ರಯಾಣಿಕರು ಕೂಡ ನಮಗೆ ಸಹಕಾರ ನೀಡಬೇಕು. ಸಾರಿಗೆ ನೌಕರರ ಹಿತ ಕಾಯಲು ನಾನು ಬದ್ಧ. ಸಂಕಷ್ಟದ ಸಂದರ್ಭದಲ್ಲೂ ಸಾರಿಗೆ ನಿಗಮ, ಸರ್ಕಾರದಿಂದ ಪೂರ್ಣ ವೇತನ ನೀಡಿದ್ದೇವೆ. ಎಲ್ಲರಿಗೂ ಸಂಬಳ ನೀಡುವ ಕೆಲಸ ಮಾಡಿದ್ದೇವೆ ಎಂದರು.
ಬೇರೆ ರಾಜ್ಯಗಳಲ್ಲಿ ಕೊರೊನಾ ಸಂದರ್ಭದಲ್ಲಿ ಶೇ.25ರಷ್ಟು ಸಂಬಳ ಕಡಿತ ಮಾಡಲಾಗಿದೆ. ಆದರೆ, ನಾವು ಹಾಗೆ ಮಾಡಿಲ್ಲ. ಇದನ್ನು ಸಾರಿಗೆ ನೌಕರರು ಅರ್ಥ ಮಾಡಿಕೊಳ್ಳಬೇಕು. ಸಾರಿಗೆ ಅಧಿಕಾರಿಗಳ ಸಭೆಯನ್ನು ಕರೆದು ಈ ಬಗ್ಗೆ ಚರ್ಚಿಸುತ್ತೇನೆ. ನೌಕರರು ತಮ್ಮ ಮುಷ್ಕರ ಹಿಂಪಡೆಯಬೇಕು ಎಂದು ಹೇಳಿದರು.