ಹುಬ್ಬಳ್ಳಿ: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ ಸ್ಪರ್ಧೆಯ ಬಗ್ಗೆ ಸಿಎಂ ಸಿದ್ಧರಾಮಯ್ಯ. ಡಿಸಿಎಂ ಡಿ.ಕೆ. ಶಿವಕುಮಾರ್ ತೀರ್ಮಾನಿಸುತ್ತಾರೆ ಎಂದು ಕೃಷಿ ಸಚಿವ ಚಲುವರಾಯ ಸ್ವಾಮಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಚನ್ನಪಟ್ಟಣ ದೊಡ್ಡವರ ಸೀಟು. ಅವರು ಕೇಂದ್ರ ಮಂತ್ರಿ ಆಗಿದ್ದಾರೆ. ಅವರ ವಿರುದ್ಧ ತೊಡೆ ತಟ್ಟೋಕೆ ಆಗುತ್ತಾ? ಸರ್ಕಾರ ರಚನೆಯಾಗಿ ಎರಡು ತಿಂಗಳಿಗೆ ಪತನ ಆಗುತ್ತದೆ ಅಂದರು. ಆದರೆ ಏನೂ ಆಗಿಲ್ಲ. ನಾವೆಲ್ಲ ಚೆನ್ನಾಗಿದ್ದೇವೆ. ಗೊಂದಲ ಇಲ್ಲ ಎಂದು ಹೇಳಿದ್ದಾರೆ.
ಮತಕ್ಕಾಗಿ ಗ್ಯಾರಂಟಿ ಕೊಟ್ಟಿಲ್ಲ, ಗ್ಯಾರಂಟಿ ನಿಲ್ಲಿಸುವ ಯೋಚನೆಯೂ ಇಲ್ಲ ಎಂದು ತಿಳಿಸಿದ ಅವರು, ಡಿ.ಕೆ. ಶಿವಕುಮಾರ್ ಗೆ ಸಿಎಂ ಸ್ಥಾನ ಕೊಡಬೇಕೆಂದು ಸ್ವಾಮೀಜಿ ಮಾತನಾಡಿದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸಿಎಂ ಸ್ಥಾನದ ಬಗ್ಗೆ ಸ್ವಾಮೀಜಿ ನಿರ್ಧಾರ ಮಾಡಲು ಆಗಲ್ಲ, ಅವರ ಅಭಿಪ್ರಾಯ ಹೇಳಿದ್ದಾರೆ ಅಷ್ಟೇ, ಸಿದ್ದರಾಮಯ್ಯ, ಡಿಕೆ ಅಣ್ಣ-ತಮ್ಮಂದಿರಂತೆ ಇದ್ದಾರೆ. ಇಬ್ಬರು ನಾಯಕರಿಗೂ ಸೂಕ್ತ ತೀರ್ಮಾನ ತೆಗೆದುಕೊಳ್ಳುವ ಶಕ್ತಿ ಇದೆ. ಚುನಾವಣೆಗೂ ಮುನ್ನ ಅನೇಕರು ಟಿಕೆಟ್ ವಿಚಾರವಾಗಿ ಕಿತ್ತಾಡುತ್ತಾರೆ ಎಂದು ಹೇಳಿದ್ದರು. ಆದರೆ ಸೀಟು ಹಂಚಿಕೆಗೂ ಕಿತ್ತಾಡಿಲ್ಲ, ಅಧಿಕಾರಕ್ಕಾಗಿಯೂ ಕಿತ್ತಾಡಿಲ್ಲ. ಈಗಲೂ ಅವರಿಬ್ಬರೇ ತೀರ್ಮಾನ ಮಾಡುತ್ತಾರೆ. ಅದು ಬಿಟ್ಟರೆ ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದ್ದಾರೆ.
ಹೆಚ್ಚುವರಿ ಉಪ ಮುಖ್ಯಮಂತ್ರಿ ಬಗ್ಗೆ ವೈಯಕ್ತಿಕವಾಗಿ ಕೆಲವರು ಅಭಿಪ್ರಾಯ ಹೇಳಿದ್ದಾರೆ. ಈ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ. ನಾನು ಅದಕ್ಕೆ ಉತ್ತರ ಹೇಳುವುದಿಲ್ಲ. ಅದು ಸರಿಯೋ ತಪ್ಪೋ ಎನ್ನುವುದನ್ನು ಪಕ್ಷ ಮತ್ತು ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದ್ದಾರೆ.