ಬೆಂಗಳೂರು: ಕರ್ನಾಟಕ ಹಾಗೂ ತಮಿಳುನಾಡು ನಡುವೆ ಕಾವೇರಿ ನೀರು ಹಂಚಿಕೆ ವಿಚಾರವಾಗಿ ಆರಂಭವಾಗಿರುವ ಸಮಸ್ಯೆಗೆ ಮೇಕೆದಾಟು ಯೋಜನೆಯೊಂದೇ ಪರಿಹಾರ. ಈ ಬಗ್ಗೆ ನಾವು ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ನ್ಯಾಯಾಲಯವೇ ಕಾವೇರಿ ನಿರ್ವಹಣಾ ಪ್ರಾಧಿಕಾರ ರಚನೆ ಮಾಡಿದ್ದು, ಇದು ತಾಂತ್ರಿಕ ಸಮಿತಿಯಾಗಿದೆ. ಸದ್ಯ ಅವರು ತಾಂತ್ರಿಕ ಅಂಶಗಳ ಬಗ್ಗೆ ಗಮನಹರಿಸಬೇಕು ಎಂದರು.
ಇಂದಿನ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸಮಸ್ಯೆಗೆ ಪರಿಹಾರ ಎಂದರೆ ಅದು ಮೇಕೆದಾಟು ಯೋಜನೆ ಮಾತ್ರ. ಮೇಕೆದಾಟು ಆಣೆಕಟ್ಟು ನಿರ್ಮಾಣವಾಗಿದ್ದರೆ ಇಂದು ಈ ಸಮಸ್ಯೆ ಹಾಗೂ ಪರಿಸ್ಥಿತಿಯೇ ಉದ್ಭವಿಸುತ್ತಿರಲಿಲ್ಲ. ಕಳೆದ ವರ್ಷ 400ಕ್ಕೂ ಹೆಚ್ಚು ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರದ ಪಾಲಾಗಿದೆ. ಅದರಲ್ಲಿ ಸ್ವಲ್ಪ ಪ್ರಮಾಣದ ನೀರನ್ನು ಮೇಕೆದಾಟು ಆಣೆಕಟ್ಟು ಮೂಲಕ ಹಿಡಿದಿಟ್ಟಿದ್ದರೆ ಈ ಸಮಸ್ಯೆಯೇ ಎದುರಾಗುತ್ತಿರಲಿಲ್ಲ. ಮೇಕೆದಾಟು ಆಣೆಕಟ್ಟು ನೀರನ್ನು ನಾವು ನೀರಾವರಿಗೆ ಬಳಸಲು ಸಾಧ್ಯವಿಲ್ಲ. ಕೇವಲ ಕುಡಿಯುವ ನೀರಿಗೆ ಬಳಸಬಹುದು. ಈ ಯೋಜನೆ ಆಗಿದ್ದರೆ ಕುಡಿಯುವ ನೀರಿಗೆ ಈಗ ಎದುರಾಗಿರುವಂತಹ ಸಂಕಷ್ಟ ಸಮಯದಲ್ಲಿ ಅನುಕೂಲವಾಗುತ್ತಿತ್ತು ಎಂದರು.
ಈ ವಿಚಾರದ ಬಗ್ಗೆ ಸುಪ್ರೀಂ ಕೋರ್ಟ್ ಗಮನ ಹರಿಸಬೇಕಿದೆ. ನಾವು ನಮ್ಮ ಅರ್ಜಿಯಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದೇವೆ. ಇನ್ನು ರಾಜ್ಯದ ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.