ಬೆಂಗಳೂರು: ರಾಜಕೀಯ ವಲಯದಲ್ಲಿ ಅದೃಷ್ಟದ ಬಂಗಲೆ ಎಂದೇ ಹೇಳಲಾಗುವ ಕುಮಾರ ಪಾರ್ಕ್ ನ 01 ಸಂಖ್ಯೆಯ ಸರ್ಕಾರಿ ನಿವಾಸಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರವೇಶಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷವಾಗಿದ್ದು, ಆರಂಭದಲ್ಲಿಯೇ ಕುಮಾರ ಪಾರ್ಕ್ ಪೂರ್ವದಲ್ಲಿ ರೈಲ್ವೆ ಹಳಿ ಪಕ್ಕದಲ್ಲಿರುವ 01ನೇ ಸಂಖ್ಯೆಯ ಬಂಗಲೆಯನ್ನು ಡಿ.ಕೆ. ಶಿವಕುಮಾರ್ ಗೆ ಹಂಚಿಕೆ ಮಾಡಲಾಗಿತ್ತು.
ಒಂದು ವರ್ಷದಿಂದ ಡಿ.ಕೆ. ಶಿವಕುಮಾರ್ ಅಲ್ಲಿಗೆ ಕಾಲಿಟ್ಟಿರಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ ಬೆನ್ನಲ್ಲೇ ಸೋಮವಾರ ಅವರು ಅದೃಷ್ಟದ ಬಂಗಲೆಗೆ ಪ್ರವೇಶಿಸಿದ್ದಾರೆ. ಮುಖ್ಯಮಂತ್ರಿಗಳಾಗಿದ್ದ ಎಸ್. ಬಂಗಾರಪ್ಪ, ಧರ್ಮಸಿಂಗ್, ಹಾಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಹಲವು ನಾಯಕರು ಕುಮಾರ ಪಾರ್ಕ್ ಪೂರ್ವದ 01ನೇ ಸಂಖ್ಯೆಯ ಬಂಗಲೆಯಲ್ಲಿ ನೆಲೆಸಿದ ನಂತರ ಮುಖ್ಯಮಂತ್ರಿ ಹುದ್ದೆಗೇರಿದ್ದರು. ಇದೇ ಕಾರಣಕ್ಕೆ ಬಂಗಲೆಗಾಗಿ ರಾಜಕೀಯ ನಾಯಕರ ನಡುವೆ ಕಿತ್ತಾಟ ಕೂಡ ನಡೆದಿತ್ತು.
ಬಿ.ಎಸ್. ಯಡಿಯೂರಪ್ಪ ಮೊದಲ ಬಾರಿ ಸಿಎಂ ಆಗಿದ್ದ ಅವಧಿಯಲ್ಲಿ ಈ ಬಂಗಲೆಯಲ್ಲಿ ಆಗಿನ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊರಗೆ ಕಳುಹಿಸಿ ಅದೃಷ್ಟದ ಬಂಗಲೆಯನ್ನು ಸಚಿವರಾಗಿದ್ದ ಶೋಭಾ ಕರಂದ್ಲಾಜೆ ಅವರಿಗೆ ಹಂಚಿಕೆ ಮಾಡುವ ಪ್ರಯತ್ನ ಕೂಡ ನಡೆಸಲಾಗಿತ್ತು.
ಪ್ರಸ್ತುತ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಹುದ್ದೆಗೇರುವ ಪ್ರಯತ್ನದಲ್ಲಿದ್ದಾರೆ. ಅದೃಷ್ಟದ ಬಂಗಲೆಯಿಂದ ಕನಸು ಕೈಗೂಡುವ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿಯೇ ಅದೃಷ್ಟದ ಬಂಗಲಿಗೆ ಪ್ರವೇಶಿಸಿದ್ದಾರೆ ಎಂದು ಹೇಳಲಾಗಿದೆ.