ಬೆಂಗಳೂರು: ಉಪಮುಖ್ಯಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದವರಿಗೆ ಬಿಜೆಪಿ ಹೈಕಮಾಂಡ್ ಬಿಗ್ ಶಾಕ್ ನೀಡಿದೆ. ಡಿಸಿಎಂ ಹುದ್ದೆ ಸೃಷ್ಟಿ ಬೇಡವೇ ಬೇಡವೆಂದು ಬಿಜೆಪಿ ಹೈಕಮಾಂಡ್ ಹೇಳಿದೆ. ಸದ್ಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ಹಂಚಿಕೆ ಮಾಡುವುದು ಬೇಡ. ಮುಂದಿನ ದಿನಗಳಲ್ಲಿ ನೋಡೋಣವೆಂದು ಬಿಜೆಪಿ ಹೈಕಮಾಂಡ್ ತಿಳಿಸಿದ್ದು, ಈ ವಿಚಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಪ್ತರಿಗೆ ಹೇಳಿದ್ದಾರೆ ಎನ್ನಲಾಗಿದೆ.
ಉಪ ಮುಖ್ಯಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದ ಬಿ. ಶ್ರೀರಾಮುಲು, ಆರ್. ಅಶೋಕ್, ಸಿ.ಎನ್. ಅಶ್ವತ್ಥನಾರಾಯಣ, ಗೋವಿಂದ ಕಾರಜೋಳ ಮೊದಲಾದವರಿಗೆ ಬಿಜೆಪಿ ಹೈಕಮಾಂಡ್ ಶಾಕ್ ನೀಡಿದೆ ಎಂದು ಹೇಳಲಾಗಿದೆ.
ಇನ್ನು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಬಸವರಾಜ ಬೊಮ್ಮಾಯಿ, ಬೆಳಗ್ಗೆ 11 ಗಂಟೆ ವೇಳೆಗೆ ನೂತನ ಸಚಿವರ ಪಟ್ಟಿಯನ್ನು ರಾಜಭವನದಿಂದ ಬಿಡುಗಡೆ ಮಾಡಲಾಗುತ್ತದೆ. ಮಧ್ಯಾಹ್ನ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ತಿಳಿಸಿದ್ದಾರೆ.
ಸಚಿವರಾಗಲಿರುವ ಶಾಸಕರಿಗೆ ಈಗಾಗಲೇ ಕರೆ ಮಾಡಿ ತಿಳಿಸಲಾಗಿದೆ. ಪ್ರಮಾಣ ವಚನ ಸ್ವೀಕರಿಸಲಿರುವ ಶಾಸಕರು ಸಿದ್ಧರಾಗಿದ್ದಾರೆ.