ಬೆಂಗಳೂರು: ಈಗಿನದು ಸೇರಿದಂತೆ ಸಂಭನೀಯ 3ನೇ ಅಲೆಯನ್ನೂ ಎದುರಿಸಲು ಸಾಧ್ಯವಾಗುವಂತೆ ಗ್ರಾಮೀಣ ಭಾಗದಲ್ಲೂ ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲು ಹೆಜ್ಜೆ ಇಟ್ಟಿರುವ ಸರ್ಕಾರ, ತಾಲೂಕು ಆಸ್ಪತ್ರೆಗಳೂ ಸೇರಿ ಹಳ್ಳಿಯ ವಿವಿಧ ಹಂತಗಳಲ್ಲೇ 8,105 ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದೆ.
ಬೆಂಗಳೂರಿನಲ್ಲಿ ಸೋಮವಾರ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಜತೆ ಮಾತುಕತೆ ನಡೆಸಿದ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಈ ಮಾಹಿತಿ ತಿಳಿಸಿದರು.
ರಾಜ್ಯದ 146 ತಾಲೂಕು ಆಸ್ಪತ್ರೆಗಳಲ್ಲಿ ಈಗಾಗಲೇ ತಲಾ 4 ರಿಂದ 6 ಐಸಿಯು ಬೆಡ್‌ಗಳಿವೆ. ಇವುಗಳನ್ನು 20 ಕ್ಕೆ ಹೆಚ್ಚಿಸಲಾಗುವುದು. ಈ ಮೂಲಕ ಒಟ್ಟು 1,925 ಐಸಿಯು ಬೆಡ್‌ಗಳು ಲಭ್ಯವಾಗುತ್ತವೆ. ಜತೆಗೆ, ರಾಜ್ಯಾದ್ಯಂತ 206 ಸಮುದಾಯ ಆರೋಗ್ಯ ಕೇಂದ್ರಗಳಿದ್ದು, ಅವುಗಳಲ್ಲಿ ಈಗ 30 ಸಾಮಾನ್ಯ ಬೆಡ್‌ಗಳಿವೆ. ಅವೆಲ್ಲವನ್ನೂ ಆಕ್ಸಿಜನ್ ಬೆಡ್‌ಗಳನ್ನಾಗಿ ಪರಿವರ್ತಿಸಲಾಗುವುದು. ಆಗ ಒಟ್ಟು 6,180 ಆಕ್ಸಿಜನ್ ಬೆಡ್‌ಗಳು ಸಿಗುತ್ತವೆ. ಪ್ರತಿ ಸಮುದಾಯ ಕೇಂದ್ರದ 30 ಬೆಡ್‌ಗಳ ಪೈಕಿ 5 ಬೆಡ್‌ಗಳನ್ನು ಅಧಿಕ ಆಮ್ಲಜನಕ ಸಾಂದ್ರತೆ(ಹೆಡೆನ್ಸಿಟಿ ಆಕ್ಸಿಜನ್)ಯುಳ್ಳ ಬೆಡ್‌ಗಳನ್ನಾಗಿ ಮಾಡಲಾಗುವುದು. ಜತೆಗೆ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ 50 ಐಸಿಯು ಬೆಡ್‌ಗಳ ವ್ಯವಸ್ಥೆ ಮಾಡಲಾಗುವುದು. ಈ ಎಲ್ಲ ನಿರ್ಧಾರಗಳನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಎರಡನೇ ಅಲೆಯಲ್ಲಿ ನಾವು ತತ್ತರಿಸಿದ್ದೇವೆ. 3 ನೇ ಅಲೆಯ ಬಗ್ಗೆ ಅಲಕ್ಷ್ಯ ಮಾಡುವುದು ಬೇಡ. ಹಿಂದೆ ಮಾಡಿದ ತಪ್ಪುಗಳನ್ನು ಮತ್ತೆ ಮಾಡುವುದು ಬೇಡ. ಹಳ್ಳಿ ಮಟ್ಟದಿಂದಲೇ ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸುತ್ತಾ ಬರಬೇಕು ಎಂದರು.
ವಾರ್ ರೂಂಗೆ ವ್ಯಾಕ್ಸಿನೇಷನ್ ಲಿಂಕ್:
ಈಗ 18 ರಿಂದ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕುವ ಕಾರ್ಯ ಶುರುವಾಗಿದೆ. ಎಲ್ಲರಿಗೂ ತಪ್ಪದೇ ಲಸಿಕೆ ಸಿಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಕೋವಿಡ್ ವಾರ್ ರೂಂಗೆ ಕೋವಿಡ್ ವ್ಯಾಕ್ಸಿನೇಷನ್ ಮಾಹಿತಿಯನ್ನು ಕೂಡ ಅಪ್‌ಲೋಡ್ ಮಾಡಲಾಗುವುದು. ಎಲ್ಲ ಮಾಹಿತಿಯೂ ಅಲ್ಲಿ ಸಿಗಬೇಕು ಎಂದು ಅವರು ಮಾಹಿತಿ ಕೊಟ್ಟರು.
ಆಕ್ಸಿಜನ್ ಸಾಂದ್ರಕ ಖರೀದಿ:
ಈಗಾಗಲೇ 3,000 ಆಮ್ಲಜನಕ ಸಾಂದ್ರಕಗಳನ್ನು(ಆಕ್ಸಿಜನ್ ಕಾನ್ಸನ್‌ಟ್ರೇಟರ್) ಖರೀದಿಗೆ ಆದೇಶಿಸಲಾಗಿದೆ. ಇನ್ನು 10,000 ಖರೀದಿಗೆ ಬೇಡಿಕೆ ಸಲ್ಲಿಸುವಂತೆ ಸೂಚಿಸಿದ್ದೇನೆ. ಈಗ ಪ್ರತಿ ದಿನ 40,000 ರಾಟ್ ಕಿಟ್ ದಿನಕ್ಕೆ ಪೂರೈಕೆ ಆಗತ್ತಿವೆ. ಇನ್ನೂ ಹೆಚ್ಚು ಖರೀದಿಗೆ ಟೆಂಡರ್ ಕರೆಯಲಾಗುತ್ತಿದೆ. ಇದೇ ವೇಳೆ 5 ಲಕ್ಷ ಡೋಸ್ ರೆಮ್ ಡೆಸಿವರ್ ಖರೀದಿಗೆ ಗ್ಲೋಬಲ್ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.
ವೈದ್ಯ ವಿದ್ಯಾರ್ಥಿಗಳ ನಿಯೋಜನೆ:
ಅಂತಿಮ ವರ್ಷದ ವೈದ್ಯಕೀಯ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರು ಅಗತ್ಯವಿದ್ದು, ಕೂಡಲೇ ವೈದ್ಯ ಶಿಕ್ಷಣ ಇಲಾಖೆ ಜತೆ ಮಾತನಾಡುವಂತೆ ಜಾವೇದ್ ಅಖ್ತರ್ ಅವರಿಗೆ ಸೂಚಿಸಿದ್ದೇನೆ. ಆಸ್ಪತ್ರೆಗಳಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ವೈದ್ಯರಿಗೆ ಒತ್ತಡ ಹೆಚ್ಚಾಗಿದ್ದು, ಅದನ್ನು ತಗ್ಗಿಸಲು ವೈದ್ಯ ವಿದ್ಯಾರ್ಥಿಗಳ ಸೇವೆ ಅತ್ಯಗತ್ಯವಾಗಿದೆ ಎಂದರು.
ಲ್ಯಾಬ್‌ಗಳಿಗೆ ಸ್ಯಾಂಪಲ್ಸ್ ಕೊಡಬೇಕಾದರೆ 500 ಕ್ಕೂ ಸ್ಯಾಂಪಲ್ಸ್‌ಗೆ ಒಂದೇ ಮೊಬೈಲ್ ಸಂಖ್ಯೆ ಕೊಟ್ಟಿರುವ ಅಂಶ ಬೆಳಕಿಗೆ ಬಂದಿದೆ. ಇನ್ಮೇಲೆ ಹಾಗೆ ಮಾಡಬಾರದು. ಸಾಸ್ಟ್ ಪೋರ್ಟಲ್‌ನಲ್ಲಿಯೇ ಐದು ಜನಕ್ಕಿಂತ ಹೆಚ್ಚು ಜನರ ಸ್ಯಾಂಪಲ್ ಒಂದು ಮೊಬೈಲ್ ಸಂಖ್ಯೆಗೆ ಲಿಂಕ್ ಆಗದಂತೆ ಬದಲಾವಣೆ ಮಾಡಲಾಗುತ್ತದೆ. ಇನ್ನು, ಟೆಲಿಫೋನಿಕ್ ಟ್ರಾಯಾಜಿಕ್ ಮಾಡಬಹುದು ಅಂತ ಕೆಲವರು ಹೇಳುತ್ತಿದ್ದಾರೆ. ಅದು ಬೇಡವೆಂದು ತಿಳಿಸಿದ್ದೇನೆ. ಭೌತಿಕ ಪರೀಕ್ಷೆಯೇ ಮಾಡಬೇಕು ಎಂದು ಅವರು ವಿವರ ನೀಡಿದ್ದಾರೆ.
ತಕ್ಷಣವೇ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ 50 ವೆಂಟಿಲೇಟರ್ ಕೊಡುವಂತೆ ಸೂಚನೆ ಕೊಟ್ಟಿದ್ದೇನೆ. ಆ ಭಾಗದಲ್ಲಿ ಸೋಂಕು ಉಲ್ಬಣವಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ ಒತ್ತಡ ಕಡಿಮೆ ಮಾಡಲು ಈ ಕೈಗೊಳ್ಳಲಾಗಿದೆ.
ಚಿಕಿತ್ಸೆ ಮತ್ತು ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು. ನಗರ ಸ್ಥಳೀಯ ಸಂಸ್ಥೆಗಳು ಮಾಡುವಂತಿಲ್ಲ. ಐಸಿಎಂಆರ್, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಜಾರಿ ಮಾಡುವ ಮಾರ್ಗಸೂಚಿಯೇ ಅಂತಿಮ ಎಂದು ತಿಳಿಸಿದ್ದಾರೆ.