ಬೆಂಗಳೂರು: ರಾಜ್ಯದ ಗ್ರಾಮೀಣ ಹಾಗೂ ನಗರ ಮತ್ತು ಪಟ್ಟಣ ಪ್ರದೇಶಗಳ ಕೊಳಗೇರಿಗಳಲ್ಲಿ ಕೋವಿಡ್ ಸೋಂಕಿತರನ್ನು ಹೋಮ್ ಐಸೋಲೇಷನ್ ಮಾಡದಿರಲು ನಿರ್ಧರಿಸಿರುವ ಸರ್ಕಾರ, ಅಂಥ ಪ್ರದೇಶಗಳ ಎಲ್ಲ ಸೋಂಕಿತರನ್ನೂ ಕೋವಿಡ್ ಕೇರ್ ಕೇಂದ್ರಗಳಿಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡುವ ಮಹತ್ವದ ನಿರ್ಧಾರ ಕೈಗೊಂಡಿದೆ.
ಬೆಂಗಳೂರಿನಲ್ಲಿ ಶನಿವಾರ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ 4 ಗಂಟೆ ಕಾಲ ನಡೆದ ಕಾರ್ಯಪಡೆಯ ಸುದೀರ್ಘ ಸಭೆಯಲ್ಲಿ ಈ ಮಹತ್ವದ ನಿರ್ಧಾರಕ್ಕೆ ಬರಲಾಗಿದೆ.
ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಅವರು, ಈ ಕುರಿತು ಮಾಹಿತಿ ನೀಡಿದರು. ಹಳ್ಳಿಗಳಲ್ಲಿ ವಾಸ ಮಾಡುವ ಸೋಂಕಿರನ್ನು ಯಾವುದೇ ಕಾರಣಕ್ಕೂ ಅವರ ಮನೆಗಳಲ್ಲೇ ಕ್ವಾರಂಟೈನ್ ಮಾಡುವುದಿಲ್ಲ. ಪಾಸಿಟಿವ್ ಆಗಿದೆ ಎಂದು ವರದಿ ಬಂದ ತಕ್ಷಣವೇ ಹತ್ತಿರದ ಕೋವಿಡ್ ಕೇರ್ ಕೇಂದ್ರಕ್ಕೆ ಶಿಫ್ಟ್ ಮಾಡಿ ಚಿಕಿತ್ಸೆ ಕೊಡಲಾಗುವುದು. ಅದೇ ರೀತಿ ನಗರ- ಪಟ್ಟಣ ಪ್ರದೇಶಗಳ ಕೊಳೆಗೇರಿಗಳಲ್ಲಿ ವಾಸ ಮಾಡುವ ಸೋಂಕಿತರಿಗೂ ಇದೇ ರೀತಿಯಲ್ಲಿ ಸ್ಥಳಾಂತರ ಮಾಡಿ ಉಚಿತ ಚಿಕಿತ್ಸೆ ಕೊಡಲಾಗುವುದು. ಸೋಂಕು ಹರಡದಂತೆ ನೋಡಿಕೊಳ್ಳಲು ಹಾಗೂ ಅವರಿಗೆ ಗುಣಮಟ್ಟದ ಚಿಕಿತ್ಸೆ, ಆಹಾರ, ಔಷಧಿ ನೀಡಲು ಸುಲಭವಾಗುತ್ತದೆ ಎಂದರು.
ಜಿಲ್ಲಾಧಿಕಾರಿಗಳಿಗೆ ಹೊಣೆ
ಗ್ರಾಮೀಣ ಭಾಗ ಹಾಗೂ ನಗರದ ಕೊಳೆಗೇರಿಗಳಿಗೆ ಆರೋಗ್ಯ ಸಿಬ್ಬಂದಿ ತೆರಳಿ ಮನೆ ಮನೆಯಲ್ಲೂ ರಾಟ್ ಟೆಸ್ಟ್ ಮಾಡಬೇಕು. ಪಾಸಿಟಿವ್ ಆದವರು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ʼನಲ್ಲಿಯೇ ಇರಬೇಕು. ಪ್ರತಿ ಪಿಹೆಚ್‌ಸಿ ಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ಮಾಡಲಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿನ ಹಾಸ್ಟೆಲ್ ಇತ್ಯಾದಿ ಕಟ್ಟಡಗಳನ್ನು ಬಳಸಿಕೊಂಡು ಕೋವಿಡ್ ಕೇರ್ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಈ ಎಲ್ಲ ಜವಬ್ದಾರಿಯನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ವಹಿಸಲು ಕಾರ್ಯಪಡೆ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಮಾಹಿತಿ ನೀಡಿದರು.