ಶಿವಮೊಗ್ಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022-23 ನೇ ಸಾಲಿನ ಬಜೆಟ್ ನಲ್ಲಿ ರೈತರ ಬೇಡಿಕೆಯಂತೆ ಯಶಸ್ವಿನಿ ಆರೋಗ್ಯ ವಿಮೆಯನ್ನು ಮರು ಜಾರಿ ಮಾಡುವುದಾಗಿ ಘೋಷಿಸಿದ್ದು, ಅದರಂತೆ ನವೆಂಬರ್ 1 ರಿಂದ ಕನ್ನಡ ರಾಜ್ಯೋತ್ಸವದ ಸುಸಂದರ್ಭದಲ್ಲಿ ಅನುಷ್ಠಾನಗೊಳಿಸುತ್ತಿರುವುದಾಗಿ ತಿಳಿಸಿ ಸರ್ಕಾರಿ ಆದೇಶ ಹೊರಡಿಸಿರುತ್ತಾರೆ.
ಅಂದಿನಿಂದ ಯಶಸ್ವಿನಿ ಯೋಜನೆಯಡಿ ರೈತರ ಸದಸ್ಯತ್ವ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿರುತ್ತದೆ. ಈ ಯೋಜನೆಯು ರಾಜ್ಯದ ರೈತ ಸದಸ್ಯರ ಅನುಕೂಲಕ್ಕಾಗಿ ಜಾರಿಗೊಂಡಿರುವ ವಿಶೇಷ ಯೋಜನೆಯಾಗಿದ್ದು, ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ಚಿಕಿತ್ಸಾ ವೆಚ್ಚದ ಗರಿಷ್ಠ ಮಿತಿ 5 ಲಕ್ಷ ರೂ.ಗೆ ನಿಗದಿಪಡಿಸಿದೆ.
ರಾಜ್ಯದ ಯಾವುದೇ ಯಶಸ್ವಿನಿ ನೆಟ್ ವರ್ಕ್ ಆಸ್ಪತ್ರೆಯಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಲು ಅವಕಾಶವಿರುತ್ತದೆ. ಗ್ರಾಮೀಣ ಭಾಗದ ಗರಿಷ್ಠ ನಾಲ್ಕು ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ 500 ರೂ.ಗಳ ವಂತಿಕೆ ಮತ್ತು ನಗರ ಭಾಗದ ಗರಿಷ್ಠ ನಾಲ್ಕು ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ 1000 ರೂ. ವಂತಿಕೆ, ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಶೇ 20 ರಷ್ಟು ಹೆಚ್ಚುವರಿಯಾಗಿ ಪಾವತಿಸತಕ್ಕದ್ದು.
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಸದಸ್ಯರಿಗೆ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ ಸಹಾಯಧನ ನೀಡುವ ಮೂಲಕ ಅವರ ವಾರ್ಷಿಕ ಸದಸ್ಯತ್ವದ ವಂತಿಗೆಯನ್ನು ಸರ್ಕಾರವೇ ಭರಿಸುತ್ತದೆ. ಜಿಲ್ಲೆಯ ರೈತರು ಹಾಗೂ ಸ್ವ-ಸಹಾಯ ಗುಂಪುಗಳ ಸದಸ್ಯರು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ ಕೋರಿದ್ದಾರೆ.