ಬೆಂಗಳೂರು: ಕೋಲಾರ -ಚಿಕ್ಕಬಳ್ಳಾಪುರ ಕೇಂದ್ರ ಸಹಕಾರ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ 9.86 ಕೋಟಿ ರೂಪಾಯಿ ಅವ್ಯವಹಾರ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ಕೋಲಾರ, ಕೆಜಿಎಫ್, ಚಿಂತಾಮಣಿ ತಾಲ್ಲೂಕು ಶಾಖೆಗಳ ವ್ಯವಸ್ಥಾಪಕರನ್ನು ಅಮಾನತು ಮಾಡಲಾಗಿದೆ.
2017 -18ನೇ ಸಾಲಿನಿಂದ 2020 -21ನೇ ಸಾಲಿನವರೆಗೆ ನಡೆದ ಅಕ್ರಮಗಳ ತನಿಖೆ ನಡೆಸುವಂತೆ ಮುನೀಶ್ ಎಂಬುವರು ದೂರು ನೀಡಿದ್ದು, ಬ್ಯಾಂಕಿನ ಆಂತರಿಕ ಪರೀಕ್ಷಣೆ ತಂಡ ತನಿಖೆ ಕೈಗೊಂಡಿತ್ತು. ಮೂರು ಶಾಖೆಗಳಲ್ಲಿ ಹಣ ದುರ್ಬಳಕೆ ಮಾಡಿಕೊಂಡಿರುವುದು ತನಿಖೆಯಲ್ಲಿ ಸಾಬೀತಾಗಿದೆ.
ಕೋಲಾರ ಶಾಖೆಯಲ್ಲಿ 1.50 ಕೋಟಿ ರೂ., ಕೆಜಿಫ್ ನಲ್ಲಿ 4.17 ಕೋಟಿ ರೂ., ಚಿಂತಾಮಣಿ ಶಾಖೆಯಲ್ಲಿ 2.23 ಕೋಟಿ ರೂ. ಹಣ ದುರ್ಬಳಕೆಯಾಗಿದೆ. ಈ ಹಿನ್ನೆಲೆಯಲ್ಲಿ ವ್ಯವಸ್ಥಾಪಕರಾದ ಎಂ. ಅಮರೇಶ್, ಜಿ.ಎನ್. ಗಿರೀಶ್, ಜಿ. ನಾಗರಾಜ್ ಅವರ ವಿರುದ್ಧ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತು ಮಾಡಲಾಗಿದೆ.
ಸ್ವಸಹಾಯ ಸಂಘಗಳ ಸಾಲಗಳ ಬಡ್ಡಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭರಿಸುತ್ತವೆ. ಬಡ್ಡಿ, ಬಿಡುಗಡೆಯಾಗದಿದ್ದರೂ ಹಣ ಸಂದಾಯವಾಗಿದೆ ಎಂದು ದಾಖಲೆಗಳಲ್ಲಿ ನಮೂದಿಸಿ ಬ್ಯಾಂಕಿನಲ್ಲಿರುವ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.