
ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ಅವಧಿಯನ್ನು ವಿಸ್ತರಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ರವೀಂದ್ರ ಮಾಂದಡ್ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
ಮಹಾ ಕುಂಭಮೇಳಕ್ಕೆ ಭಾರಿ ಪ್ರಮಾಣದಲ್ಲಿ ಜನರು ಬರುತ್ತಿರುವುದರಿಂದ ಕುಂಭಮೇಳದ ಅವಧಿಯನ್ನು ವಿಸ್ತರಿಸಲಾಗುವುದು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ.
ಮಹಾ ಕುಂಭಮೇಳದ ಅವಧಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಫೆಬ್ರವರಿ 26ಕ್ಕೆ ಮಹಾ ಕುಂಭಮೇಳ ಮುಕ್ತಾಯವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಮೂಲಕ ಮಹಾ ಕುಂಭಮೇಳದ ಅವಧಿ ವಿಸ್ತರಣೆ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಬ್ಬುತ್ತಿರುವ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಕುಂಭಮೇಳದ ಅವಧಿಯು ಧಾರ್ಮಿಕ ಮಹೂರ್ತಗಳ ಮೇಲೆ ನಿರ್ಧರಿತವಾಗಿದೆ. ಫೆಬ್ರವರಿ 26 ಶಿವರಾತ್ರಿಯಂದು ಕೊನೆಯಾಗಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ದಿನಾಂಕ ವಿಸ್ತರಿಸುವ ಯಾವುದೇ ಪ್ರಸ್ತಾಪ ಜಿಲ್ಲಾಡಳಿತದ ಮುಂದೆ ಇಲ್ಲವೆಂದು ಹೇಳಿದ್ದಾರೆ
ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು, ಕುಂಭಮೇಳದ ಅವಧಿ ವಿಸ್ತರಿಸಬೇಕೆಂದು ಮನವಿ ಮಾಡಿದ್ದರು. ಇದುವರೆಗೆ ಮಹಾಕುಂಭ ಮೇಳದಲ್ಲಿ 55 ಕೋಟಿ ಜನ ಪುಣ್ಯ ಸ್ನಾನ ಮಾಡಿದ್ದಾರೆ.