ಚಂಡೀಗಢ: ಜೂನ್ 7 ರಿಂದ 424 ವಿಐಪಿಗಳಿಗೆ ಭದ್ರತೆಯನ್ನು ಪುನಃ ಒದಗಿಸಲು ಪಂಜಾಬ್ ಸರ್ಕಾರ ನಿರ್ಧರಿಸಿದೆ. ಕಾಂಗ್ರೆಸ್ ನಾಯಕ ಹಾಗೂ ಗಾಯಕ ಸಿಧು ಮೂಸೆವಾಲಾ ಹತ್ಯೆಯಾದ ಐದು ದಿನಗಳ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.
ಭದ್ರತೆ ಹಿಂಪಡೆದ ಮರುದಿನವೇ ಮೂಸೆವಾಲಾ ಅವರನ್ನು ಹತ್ಯೆ ಮಾಡಲಾಗಿತ್ತು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಭದ್ರತಾ ಹಿಂಪಡೆಯುವ ಪಟ್ಟಿ ಸೋರಿಕೆಯಾದ ಬಗ್ಗೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.
ವಿಐಪಿಗಳ ಭದ್ರತೆಯನ್ನು ಸೀಮಿತ ಅವಧಿಗೆ ಮಾತ್ರ ಮೊಟಕುಗೊಳಿಸಲಾಗಿದೆ ಎಂದು ಸರ್ಕಾರ ಹೇಳಿದಾಗ, ಯಾರೊಬ್ಬರ ಭದ್ರತೆಯನ್ನು ತೆಗೆದು ಹಾಕುವ ಮೊದಲು ಪರಿಸ್ಥಿತಿಯನ್ನು ಸರಿಯಾಗಿ ಪರಿಶೀಲಿಸಿದ ನಂತರವೇ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.
ಮೇ 28 ರಂದು, ಪಂಜಾಬ್ ಸರ್ಕಾರ ಸಿಧು ಮೂಸ್ ವಾಲಾ ಸೇರಿದಂತೆ ರಾಜ್ಯದ 400 ಕ್ಕೂ ಹೆಚ್ಚು ವಿವಿಐಪಿಗಳ ಭದ್ರತೆಯನ್ನು ಹಿಂಪಡೆದುಕೊಂಡಿತ್ತು. ಮರುದಿನ ಪಂಜಾಬ್ ನ ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಮೂಸೆವಾಲಾ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು.
ಮೂಸೆವಾಲಾ ಹೊರತಾಗಿ ಅನೇಕ ನಿವೃತ್ತ ಅಧಿಕಾರಿಗಳು, ಶಿರೋಮಣಿ ಅಕಾಲಿ ದಳ(ಎಸ್‌ಎಡಿ) ಹಿರಿಯ ನಾಯಕರಾದ ಚರಣ್ ಜೀತ್ ಸಿಂಗ್ ಧಿಲ್ಲೋನ್, ಬಾಬಾ ಲಖಾ ಸಿಂಗ್, ಸದ್ಗುರು ಉದಯ್ ಸಿಂಗ್, ಸಂತ ತರ್ಮಿಂದರ್ ಸಿಂಗ್ ಅವರ ಭದ್ರತೆಯನ್ನೂ ಹಿಂಪಡೆಯಲಾಗಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಸಿಬ್ಬಂದಿಯ ಅಗತ್ಯವಿದ್ದು, ಪರಿಶೀಲನಾ ಸಭೆಯ ನಂತರ 424 ಜನರ ಭದ್ರತೆಯನ್ನು ಹಿಂಪಡೆಯಲಾಗಿದೆ ಎಂಬುದು ಸರ್ಕಾರದ ವಾದವಾಗಿತ್ತು. ಈಗ ಮೂಸೆವಾಲಾ ಹತ್ಯೆ ನಂತರ ಮತ್ತೆ ಭದ್ರತೆ ಒದಗಿಸಲು ನಿರ್ಧರಿಸಲಾಗಿದೆ.