ಪುದುಚೇರಿ: ಪುದುಚೇರಿ ವಿಧಾನಸಭೆಯಲ್ಲಿ ಬಹುಮತ ಪರೀಕ್ಷೆಗೆ ಒಂದು ದಿನ ಬಾಕಿ ಉಳಿದಿರುವಾಗಲೇ ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರಕ್ಕೆ ಆಘಾತ ಎದುರಾಗಿದೆ.
ಕಾಂಗ್ರೆಸ್ ಪಕ್ಷದ ಶಾಸಕ ಕೆ. ಲಕ್ಷ್ಮೀನಾರಾಯಣನ್ ಮತ್ತು ಡಿಎಂಕೆ ಪಕ್ಷದ ಶಾಸಕ ಕೆ. ವೆಂಕಟೇಶನ್ ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ವಿಧಾನಸಭೆ ಸ್ಪೀಕರ್ ವಿ.ಪಿ. ಶಿವಕೋಲುಂಡು ಅವರಿಗೆ ಭಾನುವಾರ ರಾಜೀನಾಮೆ ಸಲ್ಲಿಸಲಾಗಿದೆ.
ಸೋಮವಾರ ಕಾಂಗ್ರೆಸ್ ಮತ್ತು ಡಿಎಂಕೆ ಮೈತ್ರಿ ಬಹುಮತ ಸಾಬೀತುಪಡಿಸಬೇಕಿದೆ. ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಬಹುಮತ ಸಾಬೀತುಪಡಿಸುವ ಹಿಂದಿನ ದಿನವೇ ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಉರುಳಿಸಲು ಬಿಜೆಪಿ ಪ್ರಯತ್ನಿಸಿದೆ ಎಂದು ಸಿಎಂ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಕಾಂಗ್ರೆಸ್ ಶಾಸಕ ಕೆ. ಲಕ್ಷ್ಮೀನಾರಾಯಣನ್ ಮತ್ತು ಡಿಎಂಕೆ ಶಾಸಕ ಕೆ. ವೆಂಕಟೇಶನ್ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದು, ಅವರ ರಾಜೀನಾಮೆ ಸ್ವೀಕರಿಸಿ ಮುಖ್ಯಮಂತ್ರಿ ಮತ್ತು ವಿಧಾನಸಭಾ ಕಾರ್ಯದರ್ಶಿಗೆ ಮಾಹಿತಿ ನೀಡಲಾಗಿದೆ. ಅವರ ರಾಜೀನಾಮೆಯನ್ನು ಪರಿಶೀಲನೆ ನಡೆಸುತ್ತಿದ್ದೇನೆ ಎಂದು ಸ್ಪೀಕರ್ ತಿಳಿಸಿದ್ದಾರೆ.