ಸುಲ್ತಾನ್‌ಪುರ: ಯುಪಿ ಕ್ಯಾಬಿನೆಟ್ ಸಚಿವ ಸ್ಥಾನ ತ್ಯಜಿಸಿದ ಮರುದಿನವೇ ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಬಂಧನ ವಾರಂಟ್ ಜಾರಿಯಾಗಿದೆ.
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದಲ್ಲಿ ಸಂಪುಟ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ದಿನದ ನಂತರ ಬಿಜೆಪಿ ಶಾಸಕ ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಸ್ಥಳೀಯ ನ್ಯಾಯಾಲಯ ಬುಧವಾರ ಬಂಧನ ವಾರಂಟ್ ಜಾರಿ ಮಾಡಿದೆ.
7 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿತ್ತು. ಹಿಂದೂ ದೇವರುಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಮೌರ್ಯ ವಿರುದ್ಧ 2014 ರಲ್ಲಿ ಪ್ರಕರಣ ದಾಖಲಾಗಿತ್ತು.
ಬುಧವಾರ ನ್ಯಾಯಾಲಯದ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಸಂಸದ-ಶಾಸಕ ನ್ಯಾಯಾಲಯದ ನ್ಯಾಯಾಧೀಶ ಯೋಗೇಶ್ ಕುಮಾರ್ ಯಾದವ್ ವಾರಂಟ್ ಹೊರಡಿಸಿದ್ದಾರೆ. 2016 ರಲ್ಲಿ, ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ತಡೆಯಾಜ್ಞೆ ನೀಡಿದ್ದ ಇದೇ ಪ್ರಕರಣದಲ್ಲಿ ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿತ್ತು.
ವಾರೆಂಟ್ ಹೊರಡಿಸಿದ ನ್ಯಾಯಾಧೀಶರು ಜನವರಿ 24 ರಂದು ಮುಂದಿನ ವಿಚಾರಣೆಯ ದಿನಾಂಕವನ್ನು ನಿಗದಿಪಡಿಸಿದರು. ಜನವರಿ 6 ರಂದು ನ್ಯಾಯಾಲಯವು ಮೌರ್ಯ ಅವರಿಗೆ ಜನವರಿ 12 ರಂದು ಹಾಜರಾಗುವಂತೆ ಸೂಚಿಸಿತ್ತು. ಆದರೆ, ಅವರು ಹಾಜರಾಗಲಿಲ್ಲ ಎಂದು ವಕೀಲ ಅನಿಲ್ ತಿವಾರಿ ಹೇಳಿದ್ದಾರೆ.
ಪ್ರಭಾವಿ ಒಬಿಸಿ ನಾಯಕರಾಗಿದ್ದ ಮೌರ್ಯ ಅವರು ಯೋಗಿ ಆದಿತ್ಯನಾಥ್ ಸಂಪುಟಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದರು. ಉತ್ತರ ಪ್ರದೇಶ ಕ್ಯಾಬಿನೆಟ್‌ನಿಂದ ನಿರ್ಗಮಿಸುವ ಮೂಲಕ ರಾಜಕೀಯ ಬಿರುಗಾಳಿ ಎಬ್ಬಿಸಿದ ನಂತರ, ಶಾಸಕ ಸ್ವಾಮಿ ಪ್ರಸಾದ್ ಮೌರ್ಯ, ಬಿಜೆಪಿಗೆ ಮರಳುವ ಯೋಜನೆ ಹೊಂದಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿಯನ್ನು ತಿರಸ್ಕರಿಸಿದ್ದೇನೆ. ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ‘ನಾನು ಸಚಿವ ಸ್ಥಾನವನ್ನೇ ತ್ಯಜಿಸಿದ್ದೇನೆ. ಶೀಘ್ರದಲ್ಲೇ ಬಿಜೆಪಿ ತೊರೆಯುತ್ತೇನೆ. ಸದ್ಯಕ್ಕೆ ನಾನು ಸಮಾಜವಾದಿ ಪಕ್ಷಕ್ಕೆ ಸೇರುವುದಿಲ್ಲ. ತಮ್ಮ ರಾಜೀನಾಮೆ ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದೆ. ಪಕ್ಷವನ್ನು ಬೆಚ್ಚಿಬೀಳಿಸಿದೆ ಎಂದು ಹೇಳಿದ್ದಾರೆ.
ಮಂಗಳವಾರದಂದು ಮೌರ್ಯ ರಾಜೀನಾಮೆ ನೀಡಿದ ಕೂಡಲೇ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರೊಂದಿಗಿನ ಫೋಟೋ ಟ್ವೀಟ್ ಮಾಡಿ, ಅವರು ಎಸ್‌ಪಿಗೆ ಸೇರುತ್ತಾರೆ ಎಂದು ಖಚಿತಪಡಿಸಿದ್ದಾರೆ.