alex Certify ಮೊದಲ ಹಂತದ ಮತದಾನವಾದ ಮರುದಿನವೇ ಹೃದಯಾಘಾತದಿಂದ ಬಿಜೆಪಿ ಅಭ್ಯರ್ಥಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಹಂತದ ಮತದಾನವಾದ ಮರುದಿನವೇ ಹೃದಯಾಘಾತದಿಂದ ಬಿಜೆಪಿ ಅಭ್ಯರ್ಥಿ ಸಾವು

ಲಖ್ನೋ: ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆದ ಮರುದಿನ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕುನ್ವರ್ ಸರ್ವೇಶ್ ಅವರು ಹೃದಯಾಘಾತದಿಂದ ದೆಹಲಿಯಲ್ಲಿ ನಿಧನರಾದರು.

ಬಿಜೆಪಿಯ ಮೊರಾದಾಬಾದ್ ಶಾಸಕ ರಿತೇಶ್ ಗುಪ್ತಾ ಅವರು ರಾಷ್ಟ್ರ ರಾಜಧಾನಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ(ಎಐಐಎಂಎಸ್) ಸರ್ವೇಶ್ ನಿಧನವಾಗಿರುವುದನ್ನು ಖಚಿತಪಡಿಸಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಿಜೆಪಿಯ ಮೊರಾದಾಬಾದ್ ಅಭ್ಯರ್ಥಿಯ ನಿಧನದ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ ಮತ್ತು ಇದು ಪಕ್ಷಕ್ಕೆ “ಭರಿಸಲಾಗದ ನಷ್ಟ” ಎಂದು ಹೇಳಿದ್ದಾರೆ.

ಮೊರಾದಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಂಸದ ಕುನ್ವರ್ ಸರ್ವೇಶ್ ಸಿಂಗ್ ಅವರ ನಿಧನದಿಂದ ನನಗೆ ಆಘಾತವಾಗಿದೆ. ಇದು ಬಿಜೆಪಿ ಕುಟುಂಬಕ್ಕೆ ತುಂಬಲಾರದ ನಷ್ಟ. ಮೃತರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಸಿಎಂ ಯೋಗಿ ತಿಳಿಸಿದ್ದಾರೆ.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸರ್ವೇಶ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ ಮತ್ತು ಅವರು “ತಳಮಟ್ಟದ ನಾಯಕ”, ಅವರು ಬಿಜೆಪಿಯನ್ನು “ಬಲಪಡಿಸಲು ಶ್ರಮಿಸಿದ್ದಾರೆ” ಎಂದು ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸರ್ವೇಶ್ ಅವರ ನಿಧನಕ್ಕೆ ದುಃಖ ವ್ಯಕ್ತಪಡಿಸಿದರು. ಇದು ಅವರ ಕುಟುಂಬ, ಮೊರಾದಾಬಾದ್ ಮತ್ತು ಬಿಜೆಪಿ ಕುಟುಂಬಕ್ಕೆ “ಭರಿಸಲಾಗದ ನಷ್ಟ” ಎಂದು ತಿಳಿಸಿದ್ದಾರೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಸರ್ವೇಶ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಕುನ್ವರ್ ಸರ್ವೇಶ್ ಕುರಿತು

72 ನೇ ವಯಸ್ಸಿನಲ್ಲಿ ನಿಧನರಾದ ಸರ್ವೇಶ್ ಅವರು ಮೊರಾದಾಬಾದ್ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಕಣದಲ್ಲಿದ್ದ 12 ಅಭ್ಯರ್ಥಿಗಳಲ್ಲಿ ಒಬ್ಬರು.

ಅವರು 2014-2019 ರವರೆಗೆ ಕ್ಷೇತ್ರದಿಂದ ಲೋಕಸಭಾ ಸಂಸದರಾಗಿ ಸೇವೆ ಸಲ್ಲಿಸಿದರು. ಆದಾಗ್ಯೂ, ಅವರು ಹಿಂದಿನ ಸಾರ್ವತ್ರಿಕ ಚುನಾವಣೆಯಲ್ಲಿ(2019) ಸಮಾಜವಾದಿ ಪಕ್ಷದ ಎಸ್‌ಟಿ ಹಸನ್‌ ವಿರುದ್ಧ ಸೋತರು,

ಸರ್ವೇಶ್ ಅವರು 1991-2007 ಮತ್ತು 2012-2014ರಲ್ಲಿ ಮೊರಾದಾಬಾದ್‌ನ ಠಾಕುರ್ದ್ವಾರ ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಬಿಜೆಪಿ ಶಾಸಕರಾಗಿದ್ದರು. ಅವರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...