ರಾಜಭವನದಲ್ಲಿ ನಡೆದ ಎನ್ಸಿಪಿ ಪಕ್ಷದ ನಾಯಕ ಅಜಿತ್ ಪವಾರ್ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಸತಾರಾ ಜಿಲ್ಲೆಯ ವಾಯ್ ಕ್ಷೇತ್ರದ ಶಾಸಕ ಮಕರಂದ್ ಪಾಟೀಲ್ ಸೋಮವಾರ ಬೆಳಗ್ಗೆ ಯುಟರ್ನ್ ಹೊಡೆದಿದ್ದು ಮತ್ತೆ ಎನ್ಸಿಪಿ ಪಕ್ಷದ ನಾಯಕ ಶರದ್ ಪವಾರ್ ಜೊತೆ ಸೇರಿಕೊಂಡಿದ್ದಾರೆ.
ಬೆಳಗ್ಗೆ 8 ಗಂಟೆಗೆ ಪುಣೆಯಿಂದ ಕರಡ್ಗೆ ತೆರಳಿದ ಶರದ್ ಪವಾರ್ ರನ್ನು ಶಿರವಾಳ ಪಟ್ಟಣದಲ್ಲಿ ಪಾಟೀಲ್ ಸೇರಿದಂತೆ ಅನೇಕ ನಾಯಕರು ಸ್ವಾಗತಿಸಿದರು.
ಪುಷ್ಪಗುಚ್ಛವನ್ನು ಸ್ವೀಕರಿಸಿದ ಪವಾರ್ ಈ ವೇಳೆಯಲ್ಲಿಯೇ ಮಕರಂದ್ ಪಾಟೀಲ್ರನ್ನು ತಮ್ಮ ಕಾರಿನಲ್ಲಿಯೇ ಕೂರಿಸಿಕೊಂಡು ತೆರಳಿದ್ದಾರೆ. ದಿನವಿಡೀ ಪವಾರ್ ಜೊತೆಗಿದ್ದು ಮಹತ್ವದ ಮಾತುಕತೆ ನಡೆಸಿದ ಮಕರಂದ್ ಪಾಟೀಲ್ ಬಳಿಕ ಸತಾರಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶರದ್ ಪವಾರ್ ಜೊತೆಯಲ್ಲಿ ಸಾರ್ವಜನಿಕವಾಗಿಯೇ ಕಾಣಿಸಿಕೊಂಡಿದ್ದಾರೆ.
ನಿಮ್ಮ ನಿಲುವೇನು ಎಂಬ ಮಾಧ್ಯಮಗಳ ಪ್ರಶ್ನೆಗೆ ಒಂದೇ ವಾಕ್ಯದಲ್ಲಿ ಉತ್ತರಿಸಿದ ಮಕರಂದ್ ಪಟೇಲ್, ನಾನು ದಿನವಿಡೀ ಎಲ್ಲಿ ಕುಳಿತಿದ್ದೇನೆ ಎಂದು ನೀವೆಲ್ಲ ನೋಡಿದ್ದೀರಾ. ಈಗಾಗಲೇ ನನ್ನ ನಿಲುವು ಏನು ಅನ್ನೋದು ನಿಮಗೆ ಗೊತ್ತಾಗಿರಬಹುದು ಎಂದು ಹೇಳಿದ್ದಾರೆ. ಅದೇ ರೀತಿ ಶಹಪುರದ ಎನ್ಸಿಪಿ ಶಾಸಕ ದೌಲತ್ ದರೋಡಾ ಕೂಡ ಶರದ್ ಪವಾರ್ ಜೊತೆಯಲ್ಲಿ ಇರೋದಾಗಿ ಘೋಷಣೆ ಮಾಡಿದ್ದಾರೆ.